ಶೇಷಮೂರ್ತಿ ಅವಧಾನಿ

ಕಲಬುರಗಿ [ಜು.25] :  ರಾಜ್ಯ ರಾಜಕೀಯದಲ್ಲಿ ನಡೆದ ವಿಪ್ಲವದ ಮಧ್ಯೆ ಮೈತ್ರಿ ಸರ್ಕಾರ ಪತನವಾಗಿ, ಇದೀಗ ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುವುದರೊಂದಿಗೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿ ಪ್ರತಿನಿಧಿಸುವ ಪಕ್ಷವೇ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬ ರಾಜಕೀಯ ಭವಿಷ್ಯ ಮತ್ತೆ ನಿಜವಾಗಿದೆ. ಇದರೊಂದಿಗೆ ಕಳೆದ 6 ದಶಕಗಳಿಂದ ನಡೆದುಕೊಂಡು ಬಂದಿರುವುದು ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿಯೂ ಮರುಕಳಿಸಿರುವುದು ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ.

2 ಬಾರಿ(1985 ಹಾಗೂ 2004) ಹೊರತು ಪಡಿಸಿದರೆ 1957ರಿಂದ 2018ರವರೆಗೂ ಚಿಂಚೋಳಿ ಅಸೆಂಬ್ಲಿಯಿಂದ ಯಾರು ಶಾಸಕರಾಗಿ ಗೆದ್ದಿದ್ದಾರೋ ಅವರು ಪ್ರತಿನಿಧಿಸುವ ಪಕ್ಷವೇ ರಾಜ್ಯ ರಾಜಕೀಯದಲ್ಲಿ ಅಧಿಕಾರ ಗದ್ದುಗೆ ಹತ್ತಿದೆ! 2019ರ ಮೇನಲ್ಲಿ ಕಂಡ ಉಪ ಚುನಾವಣೆಯಲ್ಲಿ ಬಿಜೆಪಿ ಹುರಿಯಾಳು ಡಾ.ಅವಿನಾಶ ಜಾಧವ್‌ ಗೆಲುವು ಸಾಧಿಸಿದ್ದರು. ಇದಾದ ಎರಡೇ ತಿಂಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗಿರುವುದು ಈ ಮಾತಿಗೆ ಹೆಚ್ಚು ಪುಷ್ಟಿನೀಡಿದೆ.

ಈ ಹಿಂದೆ ಹೀಗಾಗಿತ್ತು:

1957ರಿಂದ ಇಲ್ಲಿಯವರೆಗೂ ಕ್ಷೇತ್ರ ಕಂಡ 15 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್‌, 2 ಬಾರಿ ಜನತಾ ದಳ, 1 ಬಾರಿ ಬಿಜೆಪಿ ಹುರಿಯಾಳುಗಳು ಇಲ್ಲಿಂದ ಗೆದ್ದಿದ್ದಾರೆ. 1957ರಲ್ಲಿ ವೀರೇಂದ್ರ ಪಾಟೀಲ್‌ ಇಲ್ಲಿಂದ ಕಾಂಗ್ರೆಸ್‌ ಹುರಿಯಾಳಾಗಿ ಗೆದ್ದ ಮೇಲೆ ಬಿಡಿ ಜತ್ತಿ ನೇತೃತ್ವದ ಕೈ ಸರ್ಕಾರ ರಚನೆಯಾಗಿತ್ತು. ವೀರೇಂದ್ರ ಪಾಟೀಲ್‌ ಇಲ್ಲಿಂದ 2 ಬಾರಿ (1967-1989) ಗೆದ್ದು ರಾಜ್ಯದ ಸಿಎಂ ಆದರು. 1972, 1978 ಹಾಗೂ 1983ರಲ್ಲಿ ಇಲ್ಲಿಂದ ಕಾಂಗ್ರೆಸ್‌ನ ದೇವೇಂದ್ರಪ್ಪ ಘಾಳಪ್ಪ ಸತತವಾಗಿ ಗೆದ್ದಾಗ ದೇವರಾಜ ಅರಸು ಸರ್ಕಾರ ರಚನೆಯಾಗಿತ್ತು. ನಂತರ ಗುಂಡೂರಾವ್‌ ಸಹ ಇದೇ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಗಿದ್ದರು. 1994ರಲ್ಲಿ ಈ ಕ್ಷೇತ್ರ ಮೊದಲ ಬಾರಿಗೆ ಜನತಾ ದಳಕ್ಕೊಲಿದು ವೈಜನಾಥ ಪಾಟೀಲ್‌ ಚಿಂಚೋಳಿಯಿಂದ ವಿಜಯ ಸಾಧಿಸಿದಾಗ ರಾಜ್ಯದಲ್ಲಿ ಎಚ್‌.ಡಿ.ದೇವೇಗೌಡ, ನಂತರ ಪಟೇಲ್‌ ನೇತೃತ್ವದ ಸರ್ಕಾರಗಳು ರಚನೆಯಾಗಿದ್ದವು.

1999ರಲ್ಲಿ ವೀರೇಂದ್ರ ಪಾಟೀಲರ ಪುತ್ರ ಕೈಲಾಸ ಪಾಟೀಲ್‌ ಗೆದ್ದಾಗ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗುವ ಮೂಲಕ ಕಾಂಗ್ರೆಸ್‌ ಸರ್ಕಾರ ರಚನೆಯಾಗಿತ್ತು. 2008ರಲ್ಲಿ ಬಿಜೆಪಿಯ ಸುನೀಲ ವಲ್ಯಾಪೂರೆ ಗೆಲವು ಕಂಡಾಗ ರಾಜ್ಯದಲ್ಲಿ ಮೊದಲ ಬಿಜೆಪಿ ಸರ್ಕಾರ ಯಡಿಯೂರಪ್ಪ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇನ್ನು 2103 ಹಾಗೂ 2018 ರಲ್ಲಿ ಮತ್ತೆ ಚಿಂಚೋಳಿ ಕೈ ಪಕ್ಷಕ್ಕೊಲಿದಿತ್ತು. 2 ಬಾರಿ ಸತತ ಡಾ.ಉಮೇಶ ಜಾಧವ್‌ ಕೈ ಹುರಿಯಾಳಾಗಿ ಇಲ್ಲಿಂದ ಗೆದ್ದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದವು.

ಉಪ ಸಮರದಲ್ಲಿ ಬಿಜೆಪಿ ಗೆಲುವು:  ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಪಾಳೇಯ ಸೇರಿದ್ದ ಡಾ.ಉಮೇಶ್‌ ಜಾಧವ್‌ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆಲುವು ಸಾಧಿಸಿದ್ದರು. ಇತ್ತ ತನ್ನ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಅವಿನಾಶ್‌ ಜಾಧವ್‌ಗೆ ಬಿಜೆಪಿ ಟಿಕೆಟ್‌ ಕೊಡಿಸುವಲ್ಲಿ ಉಮೇಶ ಜಾಧವ್‌ ಯಶಸ್ವಿಯಾಗಿದ್ದರು. ಆಗ ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ನಾಯಕರೆಲ್ಲರೂ ಇಲ್ಲಿ ಗೆದ್ದು ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತೇವೆ ಎಂದೇ ಮಾತನಾಡಿದ್ದರು. ಚಿಂಚೋಳಿಯಲ್ಲಿ ಬಿಜೆಪಿಯ ಅವಿನಾಶ್‌ ಜಾಧವ್‌ ಗೆದ್ದರು. ಇದೀಗ ರಾಜ್ಯ ಚುಕ್ಕಾಣಿ ಹಿಡಿಯಲು ಬಿಜೆಪಿ ತಯಾರಿ ನಡೆಸುತ್ತಿದೆ.