ಕಲಬುರಗಿ, [ಏ.27] : ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಚಿಂಚೋಳಿ ಕ್ಷೇತ್ರಕ್ಕೆ ಇದೇ ಮೇ 19ಕ್ಕೆ ಉಪ ಚುನಾವಣೆ ನಡೆಯಲಿದೆ.

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಭವಿಷ್ಯ ಎನ್ನುವಂತೆ ಪರಿಸ್ಥಿತಿ ಹಾಗೂ ವಾತಾವರಣ ನಿರ್ಮಾಣವಾಗಿದ್ದರಿಂದ ಚಿಂಚೋಳಿ ಕ್ಷೇತ್ರದ ಉಪಚುನಾವಣೆ ತೀವ್ರ ಮಹತ್ವ ಪಡೆದುಕೊಂಡಿದ್ದು, ಶತಾಯಗತಾವಾಗಿ ಚಿಂಚೋಳಿ ಕ್ಷೇತ್ರವನ್ನ ಗೆದ್ದು ಸಮ್ಮಿಶ್ರ ಸರ್ಕಾರದ ಸಂಖ್ಯಾಬಲವನ್ನು ಕಡಿಮೆಗೊಳಿಸಲು ರಾಜ್ಯ ಬಿಜೆಪಿ ಸರ್ಕಸ್ ನಡೆಸಿದೆ.

ಈ ಹಿನ್ನೆಯಲ್ಲಿ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಗೆ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಸಚಿವ ಸುನಿಲ್ ವಲ್ಯಾಪುರೆ ಅವರನ್ನು ಸಮಾಧಾನಪಡಿಸುವಲ್ಲಿ ಬಿ.ಎಸ್. ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಬಿಜೆಪಿಗೆ ಎದುರಾಗಿದೆ ಬಂಡಾಯದ ಭೀತಿ !

ಸುನಿಲ್ ವಲ್ಯಾಪುರೆ ಶಾಂತ
ಉಮೇಶ್ ಜಾಧವ್ ಕುಟುಂಬಕ್ಕೆ ಚಿಂಚೋಳಿ ಉಪಚುನಾವಣೆ ಟಿಕೆಟ್ ಎನ್ನುತ್ತಿದ್ದಂತೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಸುನಿಲ್ ವಲ್ಯಾಪುರೆ  ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರು. ಆದ್ರೆ, ಇದೀಗ ತಮ್ಮ ವರಸೆ ಬದಲಿಸಿದ್ದು, ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎನ್ನುವ ಮಾತುಗಳನ್ನಾಡಿದ್ದಾರೆ.

ಈ ಬಗ್ಗೆ ಇಂದು [ಶನಿವಾರ] ತಮ್ಮ ಬೆಂಬಲಿಗರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಸುನಿಲ್ ವಲ್ಯಾಪುರೆ, ಬಿಜೆಪಿ ಸರಕಾರ ರಚನೆಯ ಅವಕಾಶ ಬಂದಿದೆ. ಈ ಸಂದರ್ಭದಲ್ಲಿ ಬಂಡಾಯದ ಮಾತನಾಡದೇ ತ್ಯಾಗ ಮಾಡು ಎಂದು ನಮ್ಮ ನಾಯಕರಾದ ಬಿ.ಎಸ್ ಯಡಿಯೂರಪ್ಪ ನನಗೆ ಈ ರೀತಿ ಸಲಹೆ ನೀಡಿದ್ದು, ಅದರಂತೆ ಪಕ್ಷಕ್ಕಾಗಿ ತ್ಯಾಗಕ್ಕೆ ಸಿದ್ದನಾಗಿದ್ದೇನೆ ಎಂದರು.

ಉಮೇಶ ಜಾಧವ್ ಬಿಜೆಪಿಗೆ ಬರುವಾಗಲೇ ಚಿಂಚೋಳಿ ವಿಧಾನ ಸಭಾ ಟಿಕೆಟ್ ನಿಮ್ಮ ಕುಟುಂಬಕ್ಕೆ ನೀಡುವುದಾಗಿ ರಾಷ್ಟ್ರೀಯ ಅಧ್ಯಕ್ಷರೇ ಭರವಸೆ ನೀಡಿದ್ದರು.  ನಾವು ಜಾಧವಗೆ ಕೊಟ್ಟ ಮಾತು ಉಳಿಸಿಕೊಳ್ಳದಿದ್ರೆ ಇನ್ನಷ್ಟು ಶಾಸಕರು ಬರಲು ಹಿಂದೇಟು ಹಾಕುತ್ತಾರೆ. ಇದ್ರಿಂದ ಪಕ್ಷಕ್ಕಾಗಿ ತ್ಯಾಗಕ್ಕೆ ರೆಡಿಯಾಗು ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಅದರಂತೆ ಪಕ್ಷಕ್ಕಾಗಿ ತ್ಯಾಗಕ್ಕೆ ಸಿದ್ದನಾಗಿದ್ದೇನೆ. ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ತಮ್ಮ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಈ ಮೂಲಕ ಉಮೇಶ್ ಜಾಧವ್ ಕುಟುಂಬಕ್ಕೆ ಅಡ್ಡಿಯಾಗಿದ್ದ ಗೊಂದಲ ನಿವಾರಣೆಯಾದಂತಾಗಿದೆ.