ಎಂಕ್ಯೂ-9 ರೀಪರ್'ಗಳು ಪ್ರಿಡೇಟರ್ ಡ್ರೋನ್ ಎಂದೇ ಖ್ಯಾತವಾಗಿವೆ. ಪ್ರಿಡೇಟರ್ ಎಂದರೆ ಬೇಟೆಗಾರ ಎಂದರ್ಥ. ಈ ಡ್ರೋನ್'ಗಳು ಬೇಟೆಗಾರನ ಕಣ್ಣಿನಷ್ಟೇ ಚುರುಕು. ತನ್ನ ಬೇಟೆ(ಗುರಿ)ಯನ್ನು ಪತ್ತೆ ಹಚ್ಚುವುದಷ್ಟೇ ಅಲ್ಲ, ಅದನ್ನೂ ಹೊಡೆದುಹಾಕುವಷ್ಟು ಶಕ್ತಿವಾಗಿವೆ ಈ ಡ್ರೋನ್'ಗಳು. ಚಾಲಕರಹಿತವಾಗಿ ದೂರ ನಿಯಂತ್ರಣದಿಂದ ಈ ಡ್ರೋನ್'ಗಳನ್ನು ಆಪರೇಟ್ ಮಾಡಬಹುದು.

ವಾಷಿಂಗ್ಟನ್(ಜೂನ್ 26): ಪಾಕಿಸ್ತಾನದಂತೆ ಭಾರತಕ್ಕೆ ಖಾಯಂ ಶತ್ರುವಾಗಿರುವ ಚೀನಾ ದೇಶ ಈಗ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಭೇಟಿಯನ್ನು ಹದ್ದಿನಗಣ್ಣಿಂದ ವೀಕ್ಷಿಸುತ್ತಿದೆ. ಶಕ್ತಿಶಾಲಿ ಭಾರತವನ್ನು ನೋಡಲು ಬಯಸದ ಚೀನಾ ದೇಶಕ್ಕೆ ಈಗ ಅಮೆರಿಕದಿಂದ ಭಾರತಕ್ಕೆ ಸಿಗುವ ಶಸ್ತ್ರಾಸ್ತ್ರಗಳು ಯಾವುವು ಎಂಬ ಕುತೂಹಲ ಸದಾ ಇದ್ದೇ ಇದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಿಲಿಟರಿ ನಂಟು ಜೋರಾಗುತ್ತಿರುವುದು, ಅದರಲ್ಲೂ ನರೇಂದ್ರ ಮೋದಿ ಬಂದ ಬಳಿಕ ಎರಡೂ ದೇಶಗಳ ಸಂಬಂಧಕ್ಕೆ ಹೊಸ ಆಯಾಮ ಸಿಗುತ್ತಿರುವುದು ಚೀನಾವನ್ನು ಸದಾ ಎಚ್ಚರದಿಂದಿರುವಂತೆ ಮಾಡಿದೆ. ಈಗ ಡೊನಾಲ್ಡ್ ಟ್ರಂಪ್ ಬಂದ ಬಳಿಕವಂತೂ ಚೀನಾಗೆ ನಿದ್ದೆಯೇ ಇಲ್ಲದಂತಾಗಿದೆ. ಯಾಕೆ ಎಂದು ಬಹುಶಃ ಎಲ್ಲರಿಗೂ ಗೊತ್ತಿದೆ. ಟ್ರಂಪ್ ಮೂಲತಃ ಪಾಕ್ ವಿರೋಧಿ. ಹೀಗಾಗಿ ಸಹಜವಾಗಿಯೇ ಆತ ಭಾರತದೊಂದಿಗಿನ ಸ್ನೇಹಕ್ಕೆ ಹೆಚ್ಚು ಒತ್ತುಕೊಡುತ್ತಾರೆ.

ಪ್ರಸ್ತುತ ವಿಷಯ ಇದಲ್ಲ. ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ಪ್ರಮುಖ ಮಿಲಿಟರಿ ಒಪ್ಪಂದಗಳು ಮತ್ತೊಮ್ಮೆ ಸುದ್ದಿಗೆ ಬಂದಿವೆ. ಚೀನಾಗೆ ಪ್ರಮುಖವಾಗಿ ಒಂದು ಒಪ್ಪಂದ ತೀರಾ ತಲೆನೋವಾಗಿ ನಿಂತಿದೆ. ಅದು ಎಫ್-16 ಯುದ್ಧವಿಮಾನಗಳಲ್ಲ. ಬದಲಾಗಿ ಪ್ರಿಡೇಟರ್ ಡ್ರೋನ್'ಗಳು. ಅಮೆರಿಕದ ಜನರಲ್ ಅಟೋಮಿಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಎಂಕ್ಯೂ-9 ರೀಪರ್ ಎಂದು ಕರೆಯಲಾಗುವ ವಿಮಾನಗಳು ಅಥವಾ ಡ್ರೋನ್'ಗಳು ವಿಶ್ವದ ಅತ್ಯಂತ ಶಕ್ತಿಶಾಲಿ ಡ್ರೋನ್'ಗಳೆನಿಸಿವೆ. ಇಂಥ 22 ಡ್ರೋನ್'ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಸರಕಾರ ಒಪ್ಪಿಕೊಂಡಿದೆ. ಚೀನಾಗೆ ಈ ಡ್ರೋನ್'ಗಳು ಭಾರತದ ವಶವಾಗುತ್ತಿರುವುದು ಅಕ್ಷರಶಃ ನಿದ್ದೆಗೆಡಿಸಿದೆ.

ಈ ಡ್ರೋನ್'ಗಳಲ್ಲಿ ವಿಶೇಷತೆ ಏನಿದೆ?
ಎಂಕ್ಯೂ-9 ರೀಪರ್'ಗಳು ಪ್ರಿಡೇಟರ್ ಡ್ರೋನ್ ಎಂದೇ ಖ್ಯಾತವಾಗಿವೆ. ಪ್ರಿಡೇಟರ್ ಎಂದರೆ ಬೇಟೆಗಾರ ಎಂದರ್ಥ. ಈ ಡ್ರೋನ್'ಗಳು ಬೇಟೆಗಾರನ ಕಣ್ಣಿನಷ್ಟೇ ಚುರುಕು. ತನ್ನ ಬೇಟೆ(ಗುರಿ)ಯನ್ನು ಪತ್ತೆ ಹಚ್ಚುವುದಷ್ಟೇ ಅಲ್ಲ, ಅದನ್ನೂ ಹೊಡೆದುಹಾಕುವಷ್ಟು ಶಕ್ತಿವಾಗಿವೆ ಈ ಡ್ರೋನ್'ಗಳು. ಚಾಲಕರಹಿತವಾಗಿ ದೂರ ನಿಯಂತ್ರಣದಿಂದ ಈ ಡ್ರೋನ್'ಗಳನ್ನು ಆಪರೇಟ್ ಮಾಡಬಹುದು.

ಚೀನಾಗೆ ತಲೆನೋವಾಗಿರುವುದು ಯಾವ ವಿಷಯದಲ್ಲಿ ಅಂದರೆ ಈ ಡ್ರೋನ್'ಗಳು ಇಂಡಿಯನ್ ಓಷನ್, ಅಂದರೆ ಇಡೀ ಹಿಂದೂ ಮಹಾಸಾಗರದ ಮೇಲೆ ಹದ್ದಿನಗಣ್ಣಿಡಬಲ್ಲವು. ಇಲ್ಲಿ ಶತ್ರುಗಳು ನಡೆಸುವ ಏನೇ ಚಟುವಟಿಕೆಯಾದರೂ ಕಣ್ಣಿಗೆ ಬಿದ್ದುಬಿಡುತ್ತದೆ. ಚೀನಾಗೆ ತಲೆಬಿಸಿಯಾಗಿರುವುದು ಇಲ್ಲಿಯೇ.

ಈ ಡ್ರೋನ್'ಗಳು 50 ಸಾವಿರ ಅಡಿ ಎತ್ತರದವರೆಗೂ ಹಾರಬಲ್ಲವು. 240 ನಾಟಿಕಲ್ ಮೈಲು ವೇಗ ಅಥವಾ ಗಂಟೆಗೆ ಸುಮಾರು 400 ಕಿಮೀ ವೇಗದಲ್ಲಿ ಸತತ 27 ಗಂಟೆ ಹಾರಬಲ್ಲುವು. 1,746 ಕಿಲೋ ತೂಕದಷ್ಟು ಯುದ್ಧಾಸ್ತ್ರಗಳನ್ನು ಇದು ಹೊತ್ತೊಯ್ಯಬಲ್ಲವು.

ಇಟಲಿ, ಫ್ರಾನ್ಸ್, ಸ್ಪೇನ್, ಜರ್ಮನಿ, ಬ್ರಿಟನ್ ದೇಶಗಳು ಅಮೆರಿಕದಿಂದ ಈ ಡ್ರೋನ್'ಗಳನ್ನು ಖರೀದಿಸಿ ತಮ್ಮ ಮಿಲಿಟರಿ ಪಡೆಯ ಬತ್ತಳಿಕೆಗೆ ಸೇರಿಸಿವೆ. ಈಗ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿರುವ ಈ ಡ್ರೋನ್'ಗಳು ಭಾರತೀಯ ಸೈನ್ಯಕ್ಕೆ ಒಂದು ರೀತಿಯಲ್ಲಿ ಗೇಮ್ ಚೇಂಜರ್ ಎನಿಸಿದೆ.