ಭಾರತಕ್ಕೆ ಆತಂಕಕಾರಿ ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ
ಭಾರತದ ನೌಕಾ ನೆಲೆಗಳ ಬಗ್ಗೆ ಪಾಕ್ ಮಿತ್ರ ರಾಷ್ಟ್ರ ಚೀನಾ ಬೇಹುಗಾರಿಕೆ ನಡೆಸುತ್ತಿದೆ ಎನ್ನಲಾದ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಪಾಕಿಸ್ತಾನಕ್ಕೆ ಎಚ್ಚರಿಕೆ ಬೆನ್ನಲ್ಲೇ ಈ ವಿಚಾರ ಹೊರ ಬಿದ್ದಿದೆ.
ಚೆನ್ನೈ [ಸೆ.02]: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ವಿರುದ್ಧ ಸಮರ ಸಾರುವ ಎಚ್ಚರಿಕೆಯನ್ನು ಪಾಕಿಸ್ತಾನ ನೀಡಿದ ಬೆನ್ನಲ್ಲೇ, ಭಾರತದ ನೌಕಾ ನೆಲೆಗಳ ಬಗ್ಗೆ ಪಾಕ್ ಮಿತ್ರ ರಾಷ್ಟ್ರ ಚೀನಾ ಬೇಹುಗಾರಿಕೆ ನಡೆಸುತ್ತಿದೆ ಎನ್ನಲಾದ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಗುಪ್ತಚರ ದಳ ಎಚ್ಚರಿಕೆ ನೀಡಿದೆ.
ಹಿಂದೂ ಮಹಾಸಾಗರ ವಲಯದಲ್ಲಿರುವ ಭಾರತೀಯ ನೌಕಾ ನೆಲೆಗಳ ಬಗ್ಗೆ ಕಣ್ಣಿಡಲು ಚೀನಾ ಆಗಾಗ್ಗೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದ ಬಳಿಗೆ ತನ್ನ ಅತ್ಯಾಧುನಿಕ ಸರ್ವೇಕ್ಷಣಾ ನೌಕೆಗಳನ್ನು ರವಾನಿಸುತ್ತಿದೆ. ಭಾರತೀಯ ನೌಕಾ ನೆಲೆಗಳು ಹಾಗೂ ಅಲ್ಲಿ ನಿಯೋಜನೆಗೊಂಡಿರುವ ಯುದ್ಧ ನೌಕೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದೆ. ಇದಕ್ಕಾಗಿ ಡಾಂಗ್‌ಡಿಯಾವೋ ದರ್ಜೆಯ ಟಿಯಾನ್‌ವಾಂಗ್‌ಕ್ಸಿಂಗ್ ಎಂಬ ನೌಕೆಯನ್ನು ನಿಯೋಜನೆ ಮಾಡಿದೆ ಎಂಬ ಮಾಹಿತಿ ಗುಪ್ತಚರ ದಳಗಳಿಂದ ಲಭಿಸಿದೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.
ಚೀನಾದ ಬೇಹುಗಾರಿಕಾ ನೌಕೆ ಭಾರತದ ವಿಶಿಷ್ಟ ಆರ್ಥಿಕ ವಲಯಕ್ಕೂ ಪ್ರವೇಶಿಸಿ, ಕೆಲವು ದಿನಗಳ ಕಾಲ ಅಲ್ಲೇ ನಿಂತಿತ್ತು. ಅಂಡಮಾನ್- ನಿಕೋಬಾರ್‌ನ ಪೂರ್ವ ಸಮುದ್ರ ಗಡಿಯ ಬಳಿಯೂ ಅದು ಕಂಡುಬಂದಿದೆ ಎಂಬ ಅಂಶ ಗುಪ್ತಚರ ವರದಿಯಲ್ಲಿ ಇದೆ ಎನ್ನಲಾಗಿದೆ.
ಅಂಡಮಾನ್- ನಿಕೋಬಾರ್ ದ್ವೀಪ ಸಮೂಹ ಭಾರತೀಯ ಸಶಸ್ತ್ರ ಪಡೆಗಳಿಗೆ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ನೆಲೆಯಾಗಿದೆ. ಅಲ್ಲಿ ದೇಶದ ಮೊದಲ ಹಾಗೂ ಏಕೈಕ ಮೂರೂ ಸೇನಾ ಪಡೆಗಳ ನೆಲೆ ಇದೆ.
ಚೀನಾ ನೌಕೆ ಯಾವೆಲ್ಲಾ ಮಾಹಿತಿಯನ್ನು ಸಂಗ್ರಹಿಸಿದೆ ಹಾಗೂ ಅದರ ಉದ್ದೇಶವಾದರೂ ಏನು ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಪಾಕಿಸ್ತಾನದ ಗ್ವಾದರ್ ಹಾಗೂ ಕರಾಚಿ ನೌಕಾನೆಲೆಗಳನ್ನು ಆಧುನೀಕರಣಗೊಳಿಸುತ್ತಿರುವ ಚೀನಾ, ಅಲ್ಲಿಂದ ಭಾರತದ ಬಗ್ಗೆ ಈಗಾಗಲೇ ಬೇಹುಗಾರಿಕೆ ನಡೆಸುತ್ತಿದೆ.