ಭವಿಷ್ಯದಲ್ಲಿ ಭಾರತವನ್ನು ‘ಹದ್ದುಬಸ್ತಿನಲ್ಲಿಡುವ' ತಂತ್ರಗಾರಿಕೆಯ ಭಾಗವಾಗಿ ಈ ನೆಲೆಯನ್ನು ಚೀನಾ ಸ್ಥಾಪಿಸಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪಾಕಿಸ್ತಾನದ ವಶದಲ್ಲಿರುವ ಗಿಲ್ಗಿಟ್‌- ಬಾಲ್ಟಿಸ್ತಾನದಂತಹ ಪ್ರಕೃತಿ ಸುಂದರ ಪ್ರದೇಶಗಳನ್ನು ಚೀನಾ ಖರೀದಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಮಾಹಿತಿ ಬಯಲಾಗಿದೆ.

ವಾಷಿಂಗ್ಟನ್: ಭಾರತದ ಪರಮಶತ್ರು ಪಾಕಿಸ್ತಾನದ ಪರ ಗಟ್ಟಿಯಾಗಿ ನಿಂತು ಆ ದೇಶಕ್ಕೆ ಬಲ ತುಂಬುತ್ತಿರುವ ಕಮ್ಯುನಿಸ್ಟ್‌ ದೇಶ ಚೀನಾ, ಇದೀಗ ಪಾಕಿಸ್ತಾನದಲ್ಲಿ ಸೇನಾ ನೆಲೆಯನ್ನು ಆರಂಭಿಸುವ ಸಾಧ್ಯತೆ ಇದೆ.

ಭವಿಷ್ಯದಲ್ಲಿ ಭಾರತವನ್ನು ‘ಹದ್ದುಬಸ್ತಿನಲ್ಲಿಡುವ' ತಂತ್ರಗಾರಿಕೆಯ ಭಾಗವಾಗಿ ಈ ನೆಲೆಯನ್ನು ಚೀನಾ ಸ್ಥಾಪಿಸಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪಾಕಿಸ್ತಾನದ ವಶದಲ್ಲಿರುವ ಗಿಲ್ಗಿಟ್‌- ಬಾಲ್ಟಿಸ್ತಾನದಂತಹ ಪ್ರಕೃತಿ ಸುಂದರ ಪ್ರದೇಶಗಳನ್ನು ಚೀನಾ ಖರೀದಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಮಾಹಿತಿ ಬಯಲಾಗಿದೆ.

ಆಫ್ರಿಕಾದ ದೇಶ ಜಿಬೋಟಿಯಲ್ಲಿ ಚೀನಾ ತನ್ನ ಮೊದಲ ವಿದೇಶಿ ಸೇನಾ ನೆಲೆಯೊಂದರ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದೆ. ಆದರೆ ಅದು ಅಲ್ಲಿಗೇ ನಿಲ್ಲುವುದಿಲ್ಲ. ದೀರ್ಘಕಾಲದಿಂದ ತನ್ನ ಜತೆ ಸ್ನೇಹಯುತ ಬಾಂಧವ್ಯ ಹೊಂದಿರುವ ಪಾಕಿಸ್ತಾನ ಹಾಗೂ ಅಂತಹುದೇ ದೇಶಗಳಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸುವುದಕ್ಕೆ ಜಿಬೌಟಿ ನೆಲೆ ಮೊದಲ ಹೆಜ್ಜೆಯಾಗಬಹುದು ಎಂದು ಚೀನಾ ಮಿಲಿಟರಿ ಬಲ ಹೆಚ್ಚಳ ಕುರಿತಂತೆ ಅಮೆರಿಕದ ರಕ್ಷಣಾ ಇಲಾಖೆ ಸಂಸತ್ತಿಗೆ ವಾರ್ಷಿಕ ವರದಿ ಸಲ್ಲಿಸಿದೆ.

ತನ್ನ ಭೂಭಾಗದಿಂದ ದೂರವಿರುವ ಹಿಂದೂ ಮಹಾಸಾಗರ, ಮೆಡಿಟರೇನಿಯನ್‌ ಸಮುದ್ರ ಹಾಗೂ ಅಟ್ಲಾಂಟಿಕ್‌ ಸಮುದ್ರಗಳ ಬಂದರಿನ ಸಂಪರ್ಕ ಪಡೆಯುವ ಕಾರ್ಯವನ್ನು ಚೀನಾ ನಡೆಸುತ್ತಿದೆ. ಹೊಸದಾಗಿ ಮಿಲಿಟರಿ ನೆಲೆ ಆರಂಭಿಸುವ ದೇಶಗಳಲ್ಲಿ ತನ್ನ ಯೋಧರನ್ನೇ ನಿಯೋಜಿಸುವ ಸಂಭವವಿದೆ. ಆದರೆ ಇದಕ್ಕೆ ಎಷ್ಟು ದೇಶಗಳು ಒಪ್ಪಿಗೆ ನೀಡುತ್ತವೆ ಎಂಬುದನ್ನು ನೋಡಬೇಕಾಗುತ್ತದೆ ಎಂದು ಅಮೆರಿಕದ ವರದಿ ತಿಳಿಸಿದೆ.