ಇಂಡಸ್ ನದಿಯು ಅಂತಾರಾಷ್ಟ್ರೀಯ ನದಿಯಾಗಿದೆ. ಇದು ಜಮ್ಮು-ಕಾಶ್ಮೀರ ಮತ್ತು ಪಂಜಾಬ್ ರಾಜ್ಯದಲ್ಲೂ ಹರಿದುಹೋಗುತ್ತದೆ. ಹೀಗಾಗಿ, ಗಿಲ್ಗಿಟ್-ಬಾಲ್ಟಿಸ್ತಾನ್'ನಲ್ಲಿ ಈ ನದಿಗೆ ಅಣೆಕಟ್ಟು ನಿರ್ಮಿಸಲು ಪಾಕಿಸ್ತಾನಕ್ಕೆ ಭಾರತದಿಂದ ನೋ-ಅಬ್ಜೆಕ್ಷನ್ ಸರ್ಟಿಫಿಕೇಟ್ ಅಗತ್ಯವಿದೆ. ಪಾಕಿಸ್ತಾನವು ಇದನ್ನು ಪಡೆಯದಿದ್ದಾಗ ವರ್ಲ್ಡ್ ಬ್ಯಾಂಕ್ ಮತ್ತು ಎಡಿಬಿ ಬ್ಯಾಂಕುಗಳು ಫಂಡಿಂಗ್ ಮಾಡಲು ನಿರಾಕರಿಸಿದ್ದವು.

ನವದೆಹಲಿ(ಜೂನ್ 20): ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಇಂಡಸ್ ನದಿಯ ಮೇಲೆ ಚೀನಾ ದೇಶ ಅಣೆಕಟ್ಟು ನಿರ್ಮಾಣಕ್ಕೆ ಸಹಾಯ ಮಾಡಲಿರುವ ಸುದ್ದಿ ಕೇಳಿಬರುತ್ತಿದೆ. ಸಿಪೆಕ್ ಯೋಜನೆಯ ಒಂದು ಭಾಗವಾಗಿ ಚೀನಾ ಈ ಅಣೆಕಟ್ಟಿನ ಮೇಲೆ ಗಮನ ಹರಿಸಿದೆ. ಕಾಶ್ಮೀರದ ಭಾಗವಾಗಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಈ ಡಯಾಮರ್-ಭಾಷಾ ಅಣೆಕಟ್ಟು ನಿರ್ಮಾಣಕ್ಕೆ ಭಾರತದ ಆಕ್ಷೇಪವಿದೆ. ಈ ಹಿನ್ನೆಲೆಯಲ್ಲಿ ವರ್ಲ್ಡ್ ಬ್ಯಾಂಕ್ ಮತ್ತು ಎಡಿಬಿ ಬ್ಯಾಂಕ್'ಗಳೂ ಕೂಡ ಈ ಯೋಜನೆಗೆ ಧನಸಹಾಯ ಮಾಡಲು ಹಿಂದೇಟು ಹಾಕಿವೆ. ಅಮೆರಿಕ ಕೂಡ ಇಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಬೆಂಬಲ ನೀಡಲು ಮುಂದಾದಾಗ ಭಾರತದ ಆಕ್ಷೇಪ ಕಂಡು ಸುಮ್ಮನಾಗಿತ್ತು. ಇದೀಗ, ಚೀನಾ ದೇಶವು ಭಾರತದ ವಿರೋಧವನ್ನು ಲೆಕ್ಕಿಸದೆ ಇಂಡಸ್ ನದಿಗೆ ಅಣೆಕಟ್ಟು ಕಟ್ಟಲು ಮುಂದಾಗಿರುವುದು ಗಮನಾರ್ಹ. ಇದಕ್ಕೆ ಕೇಂದ್ರ ಸರಕಾರದ ಪ್ರತಿಕ್ರಿಯೆ ಏನು ಎಂಬುದು ಗೊತ್ತಾಗಬೇಕಿದೆ.

ಭಾರತದ ತಗಾದೆ ಏನು?
ಇಂಡಸ್ ನದಿಯು ಅಂತಾರಾಷ್ಟ್ರೀಯ ನದಿಯಾಗಿದೆ. ಇದು ಜಮ್ಮು-ಕಾಶ್ಮೀರ ಮತ್ತು ಪಂಜಾಬ್ ರಾಜ್ಯದಲ್ಲೂ ಹರಿದುಹೋಗುತ್ತದೆ. ಹೀಗಾಗಿ, ಗಿಲ್ಗಿಟ್-ಬಾಲ್ಟಿಸ್ತಾನ್'ನಲ್ಲಿ ಈ ನದಿಗೆ ಅಣೆಕಟ್ಟು ನಿರ್ಮಿಸಲು ಪಾಕಿಸ್ತಾನಕ್ಕೆ ಭಾರತದಿಂದ ನೋ-ಅಬ್ಜೆಕ್ಷನ್ ಸರ್ಟಿಫಿಕೇಟ್ ಅಗತ್ಯವಿದೆ. ಪಾಕಿಸ್ತಾನವು ಇದನ್ನು ಪಡೆಯದಿದ್ದಾಗ ವರ್ಲ್ಡ್ ಬ್ಯಾಂಕ್ ಮತ್ತು ಎಡಿಬಿ ಬ್ಯಾಂಕುಗಳು ಫಂಡಿಂಗ್ ಮಾಡಲು ನಿರಾಕರಿಸಿದ್ದವು.

2011ರಲ್ಲಿ ಪಾಕಿಸ್ತಾನದ ಪ್ರಧಾನಿ ಗಿಲಾನಿ ಅವರು ಈ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಉದ್ಘಾಟನೆ ನೆರವೇರಿಸಿದರು. ಇದು ಸಂಪೂರ್ಣಗೊಂಡರೆ 4,500 ಮೆಗಾವ್ಯಾಟ್ಸ್ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಪಾಕಿಸ್ತಾನದ ಪಾಲಿಗೆ ಇದು ಬಹಳ ಪ್ರತಿಷ್ಠಿತ ಯೋಜನೆಯೂ ಹೌದು. ಆದರೆ, 6 ವರ್ಷವಾದರೂ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. 2020ಕ್ಕೆ ನಿರ್ಮಾಣ ಕಾರ್ಯ ಮುಗಿಸುವ ಗುರಿ ಇತ್ತಾದರೂ ಇದೀಗ 2037ರವರೆಗೆ ಯೋಜನೆ ವಿಳಂಬವಾಗುತ್ತಿದೆ.

ಚೀನಾ ನಿರ್ಮಿಸಲಿರುವ ಸಿಪೆಕ್ ಕಾರಿಡಾರ್'ನಲ್ಲಿ ವಿದ್ಯುತ್ ಪೂರೈಕೆಗೆ ಈ ಅಣೆಕಟ್ಟು ಯೋಜನೆ ಬಹಳ ಮುಖ್ಯ. ಹೀಗಾಗಿ, ಚೀನಾ ದೇಶವು ಯೋಜನೆಗೆ ಪುಷ್ಟಿ ನೀಡಲು ಮುಂದಾಗಿರಬಹುದು.