ಬೀಜಿಂಗ್‌[ಜ.10]: ಹಿಂದೂ ಮಹಾಸಾಗರ ಸೇರಿದಂತೆ ತನ್ನ ಸುತ್ತಲಿನ ಸಾಗರಗಳಲ್ಲಿ ನಡೆಯುವ ಮಿಲಿಟರಿ ಬೆಳವಣಿಗೆಗಳ ಮೇಲೆ ಕಣ್ಣಿಡಲು, ಭಾರತದಷ್ಟುಬೃಹತ್‌ ಗಾತ್ರದ ಪ್ರದೇಶದ ಮೇಲೆ ನಿರಂತರ ನಿಗಾ ಇಡುವ ಅತ್ಯಾಧುನಿಕ, ಚಿಕ್ಕ ನೌಕಾ ರಾಡಾರ್‌ವೊಂದನ್ನು ಚೀನಾ ಅಭಿವೃದ್ಧಿಪಡಿಸಿದೆ.

ಶತ್ರುದೇಶಗಳ ನೌಕೆಗಳು, ವಿಮಾನಗಳು ಹಾಗೂ ಕ್ಷಿಪಣಿಗಳಿಂದ ಎದುರಾಗುವ ಅಪಾಯವನ್ನು ಈ ರಾಡಾರ್‌ ಪತ್ತೆ ಹಚ್ಚಲಿದೆ. ಚೀನಾದ ಸಮುದ್ರಗಳ ಮೇಲೆ ಕಣ್ಗಾವಲು ಇಡಲು ನೆರವಾಗಲಿದೆ. ಈಗ ಇರುವ ತಂತ್ರಜ್ಞಾನಕ್ಕಿಂತ ವೇಗವಾಗಿ ಎಚ್ಚರಿಕೆಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹಾಂಕಾಂಗ್‌ ಮೂಲದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ. ಈ ರಾಡಾರ್‌ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನಿಯೊಬ್ಬರ ಹೇಳಿಕೆಯನ್ನು ಆಧರಿಸಿ ಈ ವರದಿಯನ್ನು ಮಾಡಿದೆ.

ಚೀನಾದ ಬಳಿ ಇರುವ ಸಾಂಪ್ರದಾಯಿಕ ತಂತ್ರಜ್ಞಾನಗಳಿಂದ ಶೇ.20ರಷ್ಟುಸಾಗರ ಸೀಮೆಯ ಮೇಲಷ್ಟೇ ನಿರಂತರ ನಿಗಾ ವಹಿಸಬಹುದಾಗಿತ್ತು. ‘ಓವರ್‌ ದ ಹೊರೈಜಾನ್‌’ ಎಂಬ ಹೊಸ ರಾಡಾರ್‌ ವ್ಯವಸ್ಥೆಯಿಂದ ಇಡೀ ಸಾಗರ ಸೀಮೆ ಮೇಲೆ ಕಣ್ಣಿಡಬಹುದಾಗಿದೆ.