ಭಾರತಕ್ಕಿಂತ ಚೀನಾ ರಕ್ಷಣಾ ವೆಚ್ಚ ಅಧಿಕ: ಕೇಂದ್ರ!
ರಕ್ಷಣೆಗೆ ವೆಚ್ಚ ಮಾಡುವಲ್ಲಿ ಚೀನಾ ಮುಂದು
ಭಾರತಕ್ಕಿಂತ ಮೂರು ಪಟ್ಟು ಹೆಚ್ಚು ವೆಚ್ಚ
ಲೋಕಸಭೆಗೆ ಮಾಹಿತಿ ನೀಡಿದ ಸುಭಾಷ್ ಭಮ್ರೆ
ಜಿಡಿಪಿಯಲ್ಲಿ ಚೀನಾದ ರಕ್ಷಣಾ ಪಾಲು ಕಡಿಮೆ
ನವದೆಹಲಿ(ಜು.25): ಚೀನಾದ ರಕ್ಷಣಾ ವೆಚ್ಚ ಭಾರತಕ್ಕಿಂತ ಮೂರು ಪಟ್ಟು ಹೆಚ್ಚಳವಾಗಿದೆ. ಆದರೆ ಜಿಡಿಪಿಯಲ್ಲಿ ಚೀನಾದ ರಕ್ಷಣಾ ಪಾಲು ಭಾರತಕ್ಕಿಂತ ಕಡಿಮೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಮ್ರೆ ಹೇಳಿದ್ದಾರೆ.
ಈ ಕುರಿತು ಲೋಕಸಭೆಗೆ ಮಾಹಿತಿ ನೀಡಿರುವ ಸಚಿವರು, ಚೀನಾದ ವಾರ್ಷಿಕ ರಕ್ಷಣಾ ವೆಚ್ಚದ ಬಗ್ಗೆ ಭಾರತಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI)ಡೇಟಾಬೇಸ್ ಪ್ರಕಾರ, 2017ರಲ್ಲಿ ಚೀನಾ ರಕ್ಷಣಾ ವೆಚ್ಚಕ್ಕಾಗಿ 2,28,230 ಮಿಲಿಯನ್ ಡಾಲರ್ ಮೀಸಲಿಟ್ಟಿದೆ.
ಅದೇ ರಿತಿ ಭಾರತ ಕಳೆದ ವರ್ಷ ರಕ್ಷಣಾ ವೆಚ್ಚವಾಗಿ 63,923 ಮಿಲಿಯನ್ ಡಾಲರ್ ಮೀಸಲಿಟ್ಟಿದೆ ಎಂದು ಭಮ್ರೆ ಪ್ರಶ್ನೋತ್ತರ ಅವಧಿಯಲ್ಲಿ ಲೋಕಸಭೆಗೆ ತಿಳಿಸಿದ್ದಾರೆ. 2017ರಲ್ಲಿ ಭಾರತ ಜಿಡಿಪಿಯಲ್ಲಿ ರಕ್ಷಣಾ ವೆಚ್ಚದ ಪಾಲು ಶೇ.2.5ರಷ್ಟಿದೆ. ಆದರೆ ಚೀನಾ ಜಿಡಿಪಿಯಲ್ಲಿ ಶೇ.19ರಷ್ಟು ವೆಚ್ಚ ಮಾಡಿದೆ ಎಂದು ಭಮ್ರೆ ಲೋಕಸಭೆಗೆ ಮಾಹಿತಿ ನೀಡಿದರು.