ಎನ್‌ಎಸ್‌ಜಿ ಸೇರುವ ಭಾರತದ ಯತ್ನಕ್ಕೆ ಮತ್ತೆ ಚೀನಾ ತಗಾದೆ| ಎನ್‌ಪಿಟಿಗೆ ಸಹಿ ಹಾಕದ ದೇಶಗಳ ಬಗ್ಗೆ ಚರ್ಚೆ ಇಲ್ಲ: ಚೀನಾ

ಬೀಜಿಂಗ್‌[ಜೂ.22]: ಪರಮಾಣು ಸರಬರಾಜುದಾರರ ಸಮೂಹ (ಎನ್‌ಎಸ್‌ಜಿ) ಸೇರುವ ಭಾರತದ ಪ್ರಯತ್ನಕ್ಕೆ ಚೀನಾ ತನ್ನ ತಗಾದೆಯನ್ನು ಮುಂದುವರಿಸಿದೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ (ಎನ್‌ಪಿಟಿ)ಕ್ಕೆ ಸಹಿ ಹಾಕದ ದೇಶಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟಯೋಜನೆ ರೂಪಿಸುವವರೆಗೂ, ಭಾರತದ ಎನ್‌ಎಸ್‌ಜಿ ಸೇರ್ಪಡೆ ಕುರಿತು ಚರ್ಚೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ.

ಕಜಕಸ್ತಾನದ ಅಸ್ತಾನಾದಲ್ಲಿ ಜೂ.20 ಹಾಗೂ 21ರಂದು ಎನ್‌ಎಸ್‌ಜಿ ಅಧಿವೇಶನ ನಡೆಯಿತು. ಈ ಸಂದರ್ಭದಲ್ಲಿ ಭಾರತದ ಪ್ರವೇಶ ಕುರಿತು ಚೀನಾ ನಿಲುವೇನಾದರೂ ಬದಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್‌, ಎನ್‌ಪಿಟಿಗೆ ಸಹಿ ಹಾಕದ ದೇಶಗಳ ಬಗ್ಗೆ ಎನ್‌ಎಸ್‌ಜಿ ಚರ್ಚಿಸುವುದಿಲ್ಲ. ಹೀಗಾಗಿ ಭಾರತದ ಸದಸ್ಯತ್ವ ಕುರಿತು ಚರ್ಚೆಯಾಗಿಲ್ಲ ಎಂದರು.

48 ರಾಷ್ಟ್ರಗಳ ಕೂಟವಾಗಿರುವ ಎನ್‌ಎಸ್‌ಜಿ ಸದಸ್ಯತ್ವ ಕೋರಿ ಭಾರತ 2016ರ ಮೇ ನಲ್ಲಿ ಅರ್ಜಿ ಸಲ್ಲಿಸಿತ್ತು. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳಿಗೆ ಮಾತ್ರ ಸದಸ್ಯತ್ವ ನೀಡಬೇಕು ಎಂದು ಚೀನಾ ಹೇಳಿತ್ತು. ಆದರೆ ಭಾರತ ಆ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಭಾರತಕ್ಕೆ ಸದಸ್ಯತ್ವ ಸಿಗದಂತೆ ಮಾಡಲೆಂದೇ ಚೀನಾ ಆ ತಗಾದೆ ತೆಗೆದಿತ್ತು. ಈ ನಡುವೆ, ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದಿದ್ದರೂ, ಚೀನಾ ಕುಮ್ಕಕ್ಕಿನ ಮೇರೆಗೆ ಪಾಕಿಸ್ತಾನ ಕೂಡ ಎನ್‌ಎಸ್‌ಜಿ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿತ್ತು.