ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ: ವಿದೇಶಾಂಗ ಕಾರ್ಯದರ್ಶಿ
ಸಿಲ್ಕ್ ಬೋರ್ಡ್ ಶೃಂಗಸಭೆಗೆ ಭಾರತಕ್ಕೆ ಆಹ್ವಾನ ಬಂದಿದ್ದು, ಪಾಕ್ ಮತ್ತು ಚೀನಾ ಭಾರತದ ಸಾರ್ವಭೌಮತ್ವನ್ನು ಉಲ್ಲಂಘಿಸುವಂತೆ ಎಕನಾಮಿಕ್ ಕಾರಿಡಾರ್ ಹೊಂದಿರುವುದರಿಂದ ಭಾರತ ಹೇಗೆ ಭಾಗವಹಿಸಬೇಕು ಎನ್ನುವುದನ್ನು ವಿವರಿಸಬೇಕು ಎಂದು ಭಾರತ ಚೀನಾಗೆ ಪ್ರಶ್ನಿಸಿದೆ.
ನವದೆಹಲಿ (ಫೆ.22): ಚೀನಾ-ಪಾಕ್ ನಡುವಿನ ಎಕನಾಮಿಕ್ ಕಾರಿಡಾರ್ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದ್ದು, ಚೀನಾ ಆಹ್ವಾನಿಸಿರುವ ಸಿಲ್ಕ್ ರೋಡ್ ಶೃಂಗಸಭೆಯಲ್ಲಿ ಭಾರತ ಭಾಗವಹಿಸುವುದು ಅನಿಶ್ಚಿತವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹೇಳಿದ್ದಾರೆ.
ಸಿಲ್ಕ್ ರೋಡ್ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಭಾರತಕ್ಕೆ ಆಹ್ವಾನ ಬಂದಿದೆ. ಇದನ್ನು ನಾವು ಪರಿಶೀಲಿಸುತ್ತಿದ್ದೇವೆ. ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಈ ಶೃಂಗಸಭೆಯ ಭಾಗವಾಗಿದೆ. ಇದು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವುದರಿಂದ ಭಾರತದ ಸಾರ್ವಭೌಮತೆಯನ್ನು ಉಲ್ಲಂಘಿಸುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹೇಳಿದ್ದಾರೆ.
ದೇಶದ ಸಾರ್ವಭೌಮತ್ವದ ಬಗ್ಗೆ ಸೂಕ್ಷ್ಮ ಭಾವನೆಯನ್ನು ಹೊಂದಿರುವ ಚೀನಾಗೆ, ಇನ್ನೊಂದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾದಾಗ ಆಹ್ವಾನಕ್ಕೆ ಓಗೊಟ್ಟು ಬರಲು ಹೇಗೆ ಸಾಧ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಜೈ ಶಂಕರ್ ಹೇಳಿದ್ದಾರೆ.