ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ತನ್ನ ಸೇನಾ ಜಮಾವಣೆ ಹೆಚ್ಚಿಸಿದ ಬೆನ್ನಲ್ಲೇ, ಭಾರತ ತನ್ನ ದೂತರನ್ನು ರಹಸ್ಯವಾಗಿ ಭೂತಾನ್‌ಗೆ ಕಳುಹಿಸಿ, ಆ ದೇಶದ ಜೊತೆ ಮಾತುಕತೆ ನಡೆಸಿದೆ.

ನವದೆಹಲಿ: ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ತನ್ನ ಸೇನಾ ಜಮಾವಣೆ ಹೆಚ್ಚಿಸಿದ ಬೆನ್ನಲ್ಲೇ, ಭಾರತ ತನ್ನ ದೂತರನ್ನು ರಹಸ್ಯವಾಗಿ ಭೂತಾನ್‌ಗೆ ಕಳುಹಿಸಿ, ಆ ದೇಶದ ಜೊತೆ ಮಾತುಕತೆ ನಡೆಸಿದೆ.

ಮೂಲಗಳ ಪ್ರಕಾರ, ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಇತ್ತೀಚೆಗೆ ಭೂತಾನ್‌ಗೆ ತುರ್ತು ಮತ್ತು ಗೌಪ್ಯ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಗಡಿ ಪ್ರದೇಶಗಳಲ್ಲಿ ಚೀನಾದ ಸೇನೆ ಗಸ್ತು ಕಾರ್ಯಾಚರಿಸುತ್ತಿರುವ ಮತ್ತು ಡೋಕ್ಲಾಂನಲ್ಲಿ ಸೇನಾ ಜಮಾವಣೆ ಕುರಿತ ಮಾಹಿತಿ ದೊರಕಿರುವ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಪ್ರಮುಖ ಹಿರಿಯ ಅಧಿಕಾರಿಗಳು ಭೂತಾನ್‌ ನಾಯಕತ್ವದೊಂದಿಗೆ ಸಮಗ್ರ ಮಾತುಕತೆ ನಡೆಸಿದ್ದಾರೆ.

ಭೂತಾನ್‌ಗೆ ಸೇರಿದ ಲಾರಿಯಾಂಗ್‌, ಸರಿತಾಂಗ್‌, ಸಿಂಚುಲುಂಪಾ ಮತ್ತು ಪಾಂಗ್ಕಾ ಲಾ ಪ್ರದೇಶಗಳಲ್ಲಿ ಚೀನಾ ಸೇನೆ ಗಸ್ತು ತಿರುಗಿದ ಬಗ್ಗೆ ಮಾಹಿತಿಗಳಿವೆ. ಇನ್ನೊಂದೆಡೆಯಲ್ಲಿ ಡೋಕ್ಲಾಂನಲ್ಲಿ ಚೀನಾ ತನ್ನ ಸೇನೆ ಜಮಾಯಿಸುತ್ತಿದೆ ಎನ್ನಲಾಗಿದೆ. ಕಳೆದ ವರ್ಷ ಡೋಕ್ಲಾಂನಲ್ಲಿ ಈಗಾಗಲೇ ಚೀನಾದೊಂದಿಗೆ ಭಾರತೀಯ ಸೇನೆ 73 ದಿನಗಳ ಬಿಕ್ಕಟ್ಟು ಎದುರಿಸಿತ್ತು.