Asianet Suvarna News Asianet Suvarna News

ಚೀನಾದಿಂದ ಮತ್ತೊಂದು ಮೆಗಾ ಮಶಿನ್: ಗಂಟೆಗೆ 1000 ಕಿ.ಮೀ. ವೇಗದ ರೈಲು!

ಹಳಿಯಿಂದ 100 ಮಿ.ಮೀ. ಎತ್ತರದಲ್ಲಿ ತೇಲುತ್ತ ಸಾಗುವ ‘ಫ್ಲೈಟ್‌ ಟ್ರೇನ್‌’! ಚೀನಾದಿಂದ ಮತ್ತೊಂದು ಮೆಗಾ ಮಶಿನ್! 2025ಕ್ಕೆ ಇದರ ಮೊದಲ ಯಾನಕ್ಕೆ ಸಿದ್ಧತೆ! ರೈಲಿನ ಮಾದರಿ ಅನಾವರಣಗೊಳಿಸಿದ ಚೀನಾ! ಅಮೆರಿಕದ ಹೈಪರ್‌ಲೂಪ್‌ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆದ ಚೀನಾ

China gives the first glimpse of its 1,000 km/h train to world
Author
Bengaluru, First Published Oct 13, 2018, 1:53 PM IST

ಬಿಜಿಂಗ್(ಅ.13): ಈಗಾಗಲೇ 350 ಕಿ.ಮೀ. ವೇಗದಲ್ಲಿ ಓಡಬಲ್ಲ ಬುಲೆಟ್‌ ರೈಲನ್ನು ಓಡಿಸುತ್ತಿರುವ ಚೀನಾ, ಈಗ ಮತ್ತೊಂದು ವಿಕ್ರಮಕ್ಕೆ ಮುಂದಾಗಿದೆ. 2025ರ ವೇಳೆಗೆ ತಾಸಿಗೆ 1000 ಕಿ.ಮೀ. ವೇಗದಲ್ಲಿ ಓಡುವ ರೈಲನ್ನು ಅಭಿವೃದ್ಧಿಪಡಿಸಲು ಅದು ಮುಂದಾಗಿದ್ದು, ಇದರ ಮೊದಲ ಹಂತವಾಗಿ ಕಳೆದ ಬುಧವಾರ ಅದರ ಮಾದರಿಯನ್ನು ಅದು ಪ್ರದರ್ಶಿಸಿದೆ.

ಮುಂದಿನ ಪೀಳಿಗೆಯ ‘ಮ್ಯಾಗ್ನೆಟಿಕ್‌ ಲೆವಿಟೇಶನ್‌’ ರೈಲುಗಳನ್ನು ಅಭಿವೃದ್ಧಿಪಡಿಸಲು ಚೀನಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ದರ ಮೊದಲ ಪ್ರದರ್ಶನವು ನೈಋುತ್ಯ ಸಿಚುವಾನ್‌ ಪ್ರಾಂತ್ಯದ ಚೆಂಗ್ಡು ನಗರದಲ್ಲಿ ನಡೆದ ಸೃಜನಶೀಲ ಹಾಗೂ ಔದ್ಯಮಿಕ ಪ್ರದರ್ಶನವೊಂದರಲ್ಲಿ ನಡೆಯಿತು.

ಸರ್ಕಾರಿ ಸ್ವಾಮ್ಯದ ಚೀನಾ ಏರೋಸ್ಪೇಸ್‌ ಸೈನ್ಸ್‌ ಆ್ಯಂಡ್‌ ಇಂಡಸ್ಟ್ರಿ ಕಾರ್ಪೋರೆಷನ್‌ ಲಿಮಿಟೆಡ್‌ 2015ರಲ್ಲೇ, 1000 ಕಿ.ಮೀ. ವೇಗದಲ್ಲಿ ಓಡುವ ರೈಲಿನ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ತೊಡಗಿದೆ. ಇದಕ್ಕೆ ‘ಟಿ-ಫ್ಲೈಟ್‌’ ಎನ್ನುತ್ತಾರೆ. ಹಗುರವಾದ, ಬಿಸಿ ನಿರೋಧಕ ಹಾಗೂ ಏಕೀಕೃತ ಕ್ಯಾಬಿನ್‌ಅನ್ನು ಇದು ಹೊಂದಲಿದ್ದು, 29.2 ಮೀ. ಉದ್ದ ಹಾಗೂ 3 ಮೀ. ಅಗಲ ಹೊಂದಿದೆ ಎಂದು ಚೀನಾ ಮಾಧ್ಯಮವೊಂದು ವರದಿ ಮಾಡಿದೆ.

ಈ ರೈಲು ಹಳಿಯಿಂದ 100 ಮಿಲಿಮೀಟರ್‌ ಎತ್ತರದಲ್ಲಿ ‘ತೇಲುತ್ತ’ ಸಾಗುತ್ತದೆ ಎಂಬುದ ವಿಶೇಷ. ಏಕೆಂದರೆ ನಿರ್ವಾತ ಪ್ರದೇಶವೊಂದು ಹಳಿಯ ಮೇಲೆ ನಿರ್ಮಾಣವಾಗಿರುತ್ತದೆ ಹಾಗೂ ಮ್ಯಾಗ್ನೆಟಿಕ್‌ ಲೆವಿಟೇಶನ್‌ ತತ್ರಜ್ಞಾನ ಕೂಡ ತೇಲುವಿಕೆಗೆ ಕಾರಣವಾಗುತ್ತದೆ. ಎಂದು ಚೀನಾ ಏರೋಸ್ಪೇಸ್‌ನ ಹಿರಿಯ ಅಧಿಕಾರಿ ವಾಂಗ್‌ ಯನ್‌ ಹೇಳಿದ್ದಾರೆ.

ಹೀಗೆ ತೇಲುತ್ತ ಸಾಗುವ ರೈಲು ಕ್ರಮೇಣ 1000 ಕಿ.ಮೀ. ವೇಗವನ್ನು ತೆಗೆದುಕೊಳ್ಳುತ್ತದೆ. ಇದರಿಂದ ಯಾವುದೇ ಅನಾಹುತ ಆಗುವುದಿಲ್ಲ. ಪ್ರಯಾಣಿಕರು ಸುರಕ್ಷಿತವಾಗಿರಲಿದ್ದು, ಆರಾಮದಾಯಕ ಪ್ರವಾಸ ನಡೆಸಲಿದ್ದಾರೆ ಎಂದು ವಾಂಗ್‌ ಹೇಳುತ್ತಾರೆ.

ಅಮೆರಿಕಕ್ಕೆ ಸಡ್ಡು:

ಅಮೆರಿಕ ಕೂಡ ಇಂಥದ್ದೇ ಮಾದರಿಯ ಹೈಪರ್‌ಲೂಪ್‌ ಸಾರಿಗೆ ತಂತ್ರಜ್ಞಾನದ ಮೂಲಕ 1000 ಕಿ,ಮೀ.ಗೂ ಹೆಚ್ಚು ವೇಗದಲ್ಲಿ ಸಾಗುವ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈಗ ಅಮೆರಿಕಕ್ಕೆ ಸರಿಸಮನಾಗಿ ತಾನೂ ‘ಫ್ಲೈಟ್‌ ಟ್ರೇನ್‌’ಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಚೀನಾ ಹೇಳಿದೆ.

ಫ್ಲೈಟ್‌ ಟ್ರೇನ್‌ನಲ್ಲಿ ಬಳಸಲಾಗುವ ತಂತ್ರಜ್ಞಾನ ವಿಮಾನ ನಿರ್ಮಾಣದಲ್ಲಿ ಬಳಸುವಂಥದ್ದಾಗಿದೆ. ಚೀನಾ ವಿಶ್ವದ ಅತಿ ದೊಡ್ಡ ರೈಲು ಸಂಪರ್ಕ ಹೊಂದಿದ್ದು, 22 ಸಾವಿರ ಕಿ.ಮೀ. ಉದ್ದದ ಮಾರ್ಗ ಹೊಂದಿದೆ.

Follow Us:
Download App:
  • android
  • ios