ಮಸೂದ್ ಅಜರ್ ವಿಚಾರದಲ್ಲಿ ಚೀನಾ ತಳೆದಿರುವ ನಿಲುವು ಯಾರಿಗೂ ಒಳ್ಳೆಯದಲ್ಲ. ಚೀನಾ ಇದಕ್ಕೆ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಎಚ್ಚರಿಕೆ ನೀಡಿದ್ದಾರೆ.

ಬೀಜಿಂಗ್(ಅ. 10): ಎನ್'ಎಸ್'ಜಿಗೆ ಭಾರತವನ್ನು ಸೇರಿಸುವ ಕುರಿತು ಬೇಕಾದರೆ ತಾನು ಮಾತುಕತೆಗೆ ಸಿದ್ಧ. ಆದರೆ, ಮಸೂದ್ ಅಜರ್'ಗೆ ನಿಷೇಧ ಹೇರುವ ವಿಚಾರದಲ್ಲಿ ತಾನು ಭಾರತಕ್ಕೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಚೀನಾ ದೇಶ ಮತ್ತೊಮ್ಮೆ ಕಡ್ಡಿತುಂಡಾಗುವ ರೀತಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಮಸೂದ್ ಅಜರ್ ವಿಷಯದಲ್ಲಿ ಭಾರತ ಸರಕಾರವು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಚೀನಾ ಆರೋಪಿಸಿದೆ.

ನಮ್ಮ ನಿಲುವು ಯಾವಾಗಲೂ ಭಯೋತ್ಪಾದನೆಗೆ ವಿರುದ್ಧವಾಗಿಯೇ ಇದೆ. ಆದರೆ, ಮಸೂದ್ ಅಜರ್ ವಿಚಾರದಲ್ಲಿ ಭಾರತದೊಂದಿಗೆ ತಾನು ಸಹಮತದಿಂದಿರಲು ಸಾಧ್ಯವಿಲ್ಲ. ಭಾರತವು ರಾಜಕೀಯ ಲಾಭಕ್ಕೋಸ್ಕರ ಅಜರ್ ನಿಷೇಧಕ್ಕೆ ಒತ್ತಾಯಿಸುತ್ತಿದೆ ಎಂಬುದು ನಮ್ಮ ಅನಿಸಿಕೆ ಎಂದು ಚೀನಾದ ಉಪ ವಿದೇಶಾಂಗ ಸಚಿವ ಲೀ ಬಾವೋಡಾಂಗ್ ಹೇಳಿದ್ದಾರೆ.

ಪಠಾಣ್'ಕೋಟ್ ಸೇನಾ ನೆಲೆ ಮೇಲೆ ನಡೆದ ಉಗ್ರರ ದಾಳಿ ಕೃತ್ಯದ ಹಿಂದೆ ಪಾಕಿಸ್ತಾನದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕೈವಾಡ ಇದೆ ಎಂಬುದು ಭಾರತದ ಆರೋಪವಾಗಿದೆ. ಅದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನೂ ಪಾಕಿಸ್ತಾನಕ್ಕೆ ನೀಡಲಾಗಿದೆ. ಈತನನ್ನು ಅಂತಾರಾಷ್ಟ್ರೀಯ ಉಗ್ರರ ಲಿಸ್ಟ್'ಗೆ ಸೇರಿಸಬೇಕು. ವಿಶ್ವಸಂಸ್ಥೆಯಿಂದ ಈತನನ್ನು ನಿಷೇಧಿಸಬೇಕು ಎಂಬುದು ಭಾರತದ ಒತ್ತಾಯವಾಗಿದೆ. ಈ ವಿಚಾರದಲ್ಲಿ ಭಾರತದ ಪ್ರಯತ್ನಕ್ಕೆ ಚೀನಾ ತಡೆಗೋಡೆಯಾಗಿ ನಿಂತಿದೆ. ಮಸೂದ್ ಅಜರ್'ನನ್ನು ಉಗ್ರನೆಂದು ಗುರುತಿಸಲು ಚೀನಾ ನಿರಾಕರಿಸುತ್ತಿದೆ.

ಬಿಜೆಪಿ ಟೀಕೆ:
ಮಸೂದ್ ಅಜರ್ ವಿಚಾರದಲ್ಲಿ ಚೀನಾ ತಳೆದಿರುವ ನಿಲುವು ಯಾರಿಗೂ ಒಳ್ಳೆಯದಲ್ಲ. ಚೀನಾ ಇದಕ್ಕೆ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಎಚ್ಚರಿಕೆ ನೀಡಿದ್ದಾರೆ.