ನವದೆಹಲಿ[ಆ.03]: ರಾಷ್ಟ್ರ ರಾಜಧಾನಿ ನವದೆಹಲಿ ಮೆಟ್ರೋ ಸ್ಟೇಷನ್ ನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಾಯಿಯನ್ನು, ಅಪ್ರಾಪ್ತ ಮಗು ಕಾಪಾಡಿರುವ ಘಟನೆ ಬೆಳಕಿಗೆ ಬಂದಿದೆ. 

ಹೌದು ಗುರುವಾರದಂದು ತಾಯಿ ತನ್ನ ಮಕ್ಕಳೊಂದಿಗೆ ದೆಹಲಿಯ ಮೆಟ್ರೋ ಸ್ಟೇಷನ್ ತಲುಪಿದ್ದಳು. ಆದರೆ ಕೆಲವೇ ಕ್ಷಣದಲ್ಲಿ ತಾಯಿ ತನ್ನನ್ನು ಬಿಟ್ಟು ಮೆಟ್ರೋ ಹಳಿಯ ಬಳಿ ತೆರಳುತ್ತಿರುವುದು ಮಗುವಿನ ಗಮನಕ್ಕೆ ಬಂದಿದೆ. ಸಮಯ ಪ್ರಜ್ಞೆ ಮೆರೆದ ಮಗು ಕೂಡಲೇ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗೆ ಮಾಹಿತಿ ನೀಡಿದೆ. ಇದರಿಂದ ಅಲರ್ಟ್ ಆದ ಗಾರ್ಡ್ ತಾಯಿಯನ್ನು ಕಾಪಾಡಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ CISF ಸಿಬ್ಬಂದಿ ವಾಯುವ್ಯ ದೆಹಲಿಮೆಟ್ರೋ ಸ್ಟೇಷನ್ ನಲ್ಲಿ ತಾಯಿಯೊಬ್ಬಳು ತನ್ನಿಬ್ಬರು ಮಗುವಿನೊಂದಿಗೆ ಬಂದಿದ್ದಳು. ತನ್ನಿಬ್ಬರು ಮಕ್ಕಳನ್ನು ಹಳಿಯಿಂದ ಬಹಳ ದೂರ ನಿಲ್ಲಿಸಿದ ಆಕೆ, ಆತ್ಮಹತ್ಯೆಗೆಂದು ಪ್ಲಾಟ್ ಫಾರಂ ಬಳಿ ತೆರಳಲಾರಂಭಿಸಿದ್ದಳು. ಆ ಸಂದರ್ಭದಲ್ಲಿ ಅಲ್ಲಿ ಯಾರೂ ಇರಲಿಲ್ಲ' ಎಂದಿದ್ದಾರೆ.

ಮಕ್ಕಳು ಬಹಳಷ್ಟು ಸಮಯ ತಾಯಿಗಾಗಿ ಕಾದಿದ್ದಾರೆ. ಬಹಳ ಹೊತ್ತಾದರೂ ತಾಯಿ ಬಾರದಿರುವುದರಿಂದ ಮಕ್ಕಳು ಕಂಗಾಲಾಗಿದ್ದಾಋಎ. ಹೀಗಾಗಿ ಒಬ್ಬ ಮಗ ಸೆಕ್ಯುರಿಟಿ ಗಾರ್ಡ್ ಬಳಿ ತೆರಳಿ 'ನಮ್ಮ ತಾಯಿ ಬಹಳ ಸಮಯದಿಂದ ಕಾಣುತ್ತಿಲ್ಲ' ಎಂದಿದ್ದಾರೆ. ಮಕ್ಕಳ ಮಾತು ಕೆಳಿ ಅಲರ್ಟ್ ಆದ ಸಿಬ್ಬಂದಿ ಪ್ಲಾಟ್ ಫಾರಂ ಬಳಿ ತೆರಳಿ ತಾಯಿಯನ್ನು ರಕ್ಷಿಸಿದ್ದಾರೆ.

ಮಹಿಳೆಯನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ. ಮಹಿಳೆ ಮಾನಸಿಕವಾಗಿ ಬಹಳಷ್ಟು ನೊಂದಿದ್ದಾಳೆ. ಹೀಗಾಗಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.