* ಅರಿಯದ ವಯಸ್ಸಲ್ಲಾದ ಬಾಲ್ಯ ವಿವಾಹದ ಬಂಧನ* ರಾಜಸ್ಥಾನದ ಯುವತಿಯಿಂದ ದಿಟ್ಟ ನಡೆ* ಗಂಡನ ಫೇಸ್ಬುಕ್ ಬಳಸಿ ಬಾಲ್ಯವಿವಾಹ ಸಾಬೀತು* ಯುವತಿಯ ಸಹಾಯಕ್ಕೆ ಬಂದ ಎನ್'ಜಿಒ ಕಾರ್ಯಕರ್ತೆ
ನವದೆಹಲಿ(ಅ. 13): ಈಕೆಯ ವಯಸ್ಸು ಈಗ 19 ವರ್ಷ. ಬಾಲ್ಯದಲ್ಲೇ ವಿವಾಹವಾದವಳು. ಈಕೆಗೆ 12 ವರ್ಷವಿದ್ದಾಗ ಆಕೆಯ ಸಮವಯಸ್ಕ ವ್ಯಕ್ತಿಯೊಂದಿಗೆ ಗುಪ್ತವಾಗಿ ಮದುವೆ ಮಾಡಿಸಲಾಗಿತ್ತು. ಬಳಿಕ ಸಂಪ್ರದಾಯದಂತೆ ತವರಿನಲ್ಲೇ ಉಳಿದ ಈಕೆ 18 ವರ್ಷ ತುಂಬಿದಾಗ ಗಂಡನ ಮನೆಗೆ ಹೋಗುವುದು ಅನಿವಾರ್ಯವಾಗಿತ್ತು. ಅತ್ತ, ತನ್ನನ್ನು ಮದುವೆಯಾಗಿದ್ದ ಗಂಡ ಈಗ ಮಹಾ ಕುಡುಕ. ಈ ಹುಡುಗಿಯೋ ಇನ್ನೂ ಓದಬೇಕೆಂಬ ಹಂಬಲ. ಎಲ್ಲಾ ಬಿಟ್ಟು ಕುಡುಕ ಗಂಡನೊಂದಿಗೆ ಬಾಳುವೆ ಮಾಡುವುದು ಹೇಗೆ ಎಂಬ ಚಿಂತೆ. ತನಗೆ ತಿಳಿಯದ ವಯಸ್ಸಿನಲ್ಲಿ ಮದುವೆಯಾದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುವುದು ಹೇಗೆ ಎಂದು ಕಾಡುವ ಪ್ರಶ್ನೆ.
ಇದು ರಾಜಸ್ಥಾನದ ಸುಶೀಲಾ ಬಿಷ್ಣೋಯ್ ಎಂಬ ಯುವತಿಯ ಕಥೆ-ವ್ಯಥೆ. ತನಗೆ ಒಲ್ಲದ ದಾಂಪತ್ಯದ ಉರುಳಿನಿಂದ ತಪ್ಪಿಸಿಕೊಳ್ಳಲು ಸುಶೀಲಾ ಪಣ ತೊಡುತ್ತಾಳೆ. ಮನೆಯಿಂದ ಓಡಿ ಹೋಗುವ ಈಕೆಯು ಎನ್'ಜಿಒ ಕಾರ್ಯಕರ್ತೆ ಭಾರತಿ ಎಂಬುವರನ್ನು ಭೇಟಿಯಾಗುತ್ತಾಳೆ. ಅಲ್ಲಿಂದ ಈಕೆಯ ಜೀವನಕ್ಕೆ ತಿರುವು ಸಿಕ್ಕುತ್ತದೆ.
"ಇದು ನನಗೆ ಬದುಕು ಮತ್ತು ಸಾವಿನ ಪ್ರಶ್ನೆಯಾಗಿತ್ತು. ನಾನು ಬದುಕಲು ನಿಶ್ಚಯಿಸಿದೆ," ಎಂದು ಸುಶೀಲಾ ಬಿಷ್ಣೋಯ್ ಹೇಳುತ್ತಾಳೆ.
ತನ್ನ ಬಾಲ್ಯ ವಿವಾಹವನ್ನು ಹೇಗಾದರೂ ರುಜುವಾತು ಮಾಡಬೇಕಿತ್ತು. ಭಾರತಿಯವರ ಸಹಾಯದಿಂದ ಸುಶೀಲಾ ತನ್ನ ಗಂಡನ ಫೇಸ್ಬುಕ್ ಪೇಜನ್ನು ಜಾಲಾಡುತ್ತಾಳೆ. ಟೈಮ್'ಲೈನ್'ನಲ್ಲಿ ನೋಡಿಕೊಂಡು ಹೋಗುತ್ತಿದ್ದಾಗ ಅಲ್ಲಿ ಆತನಿಗೆ ಮದುವೆಯ ಶುಭಕೋರಿದ ಸಂದೇಶಗಳು ಸಿಕ್ಕುತ್ತವೆ. 2010ರಲ್ಲಿ ಮದುವೆಯಾದಾಗ ಅವರಿಬ್ಬರ ವಯಸ್ಸು 12 ವರ್ಷವಿರುತ್ತದೆ.
ಈ ಫೇಸ್ಬುಕ್ ಮೆಸೇಜ್'ಗಳನ್ನೇ ಆಧಾರವಾಗಿಟ್ಟುಕೊಂಡು ಸುಶೀಲಾ ಕೋರ್ಟ್ ಮೆಟ್ಟಿಲೇರುತ್ತಾಳೆ. ನ್ಯಾಯಾಲಯವು ಈ ಸಾಕ್ಷ್ಯಾಧಾರವನ್ನು ಒಪ್ಪಿಕೊಂಡು ಈಕೆಯ ಮದುವೆಯನ್ನು ಅನೂರ್ಜಿತಗೊಳಿಸುತ್ತದೆ. ಅಲ್ಲಿಗೆ, ಸುಶೀಲಾ ಬಿಷ್ಣೋಯ್'ರಿಗೆ ಹೊಸ ಜೀವನ ಪ್ರಾರಂಭವಾದಂತಾಗುತ್ತದೆ.
