ಹಾಸನ: ಮುಂದಿನ ಲೋಕಸಭೆ ಚುನಾವಣೆಗೆ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದರೆ ಖಂಡಿತ ಸ್ಪರ್ಧಿಸುವುದಾಗಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. 

ಈ ಕ್ಷೇತ್ರದ ಹಾಲಿ ಸಂಸದರಾಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮುಂದಿನ ಬಾರಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಕುತೂಹಲ ಮನೆ ಮಾಡಿರುವ ಸಂದರ್ಭದಲ್ಲೇ ಸಿ.ಟಿ.ರವಿಯವರ ಈ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.

ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಕ್ಷವು ನನಗೆ ಉತ್ತಮ ಸ್ಥಾನ ಮಾನವನ್ನು ನೀಡಿದೆ. ಆದರೆ ಪಕ್ಷದ ಬಲವರ್ಧನೆಗಾಗಿ ವರಿಷ್ಠರು ಹಾಸನ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸೂಚಿಸಿದರೆ ಖಂಡಿತ ಕಣಕ್ಕಿಳಿಯುತ್ತೇನೆ ಎಂದರು. 

ಇದೇವೇಳೆ ಮುಖ್ಯಮಂತ್ರಿ ಕುಮರಸ್ವಾಮಿ ಅವರ ಟೆಂಪಲ್‌ ರನ್‌ ಅನ್ನೂ ತರಾಟೆಗೆ ತೆಗೆದುಕೊಂಡ ಅವರು, ಮುಖ್ಯಮಂತ್ರಿಯವರು ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಗಮನ ಕೊಡದೆ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ದೇವರ ಮೇಲೆ ನಂಬಿಕೆ ಇರಬೇಕು ಆದರೆ ಇಷ್ಟೊಂದು ಇರಬಾರದು ಎಂದು ಟೀಕಿಸಿದರು.