ಚಿಕ್ಕಮಗಳೂರು(ನ.22): ಬಜರಂಗದಳ, ವಿಶ್ವಹಿಂದೂ ಪರಿಷತ್ ದತ್ತಜಯಂತಿ ಅಭಿಯಾನ ಅಂಗವಾಗಿ ಹಮ್ಮಿಕೊಂಡಿರುವ ದತ್ತ ರಥಯಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ ರಥಯಾತ್ರೆಗೆ ಪೂರಕವಾಗಿ ಬೈಕ್ ಜಾಥಾ, ಪಾದಯಾತ್ರೆ, ಮೆರವಣಿಗೆ ಮತ್ತು ಸಾರ್ವಜನಿಕ ಸಭೆ, ಸಮಾರಂಭಗಳನ್ನು ನ. 24ರ ಬೆಳಗ್ಗೆ 6 ಗಂಟೆಯಿಂದ ಡಿ. 2ರ ಮಧ್ಯಾಹ್ನ 12 ಗಂಟೆಯವರೆಗೆ ನಿಷೇಧಿಸಲಾಗಿದೆ.

ದತ್ತ ಜಯಂತಿ ಹಾಗೂ ಈದ್ ಮಿಲಾದ್ ಒಂದೇ ದಿನವೇ ಬಂದಿರುವುದರಿಂದ ಕಾನೂನು ಸುವ್ಯವಸ್ಥೆ ಸಲುವಾಗಿ 48 ಮಂದಿ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಿದ್ದು, ಅವರು ನ. 30ರಿಂದ ಡಿ.4ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ನ. 23ರಂದು ದತ್ತಮಾಲೆ ಧರಿಸಲಿದ್ದಾರೆ. ಡಿ. 1ರಂದು ಅನುಸೂಯ ದೇವಿ ಜಯಂತಿ ಅಂಗವಾಗಿ ಸಂಕೀರ್ತನಾ ಯಾತ್ರೆ, ಡಿ.2ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ, ಡಿ.3 ರಂದು ದತ್ತ ಜಯಂತಿ ಉತ್ಸವ ನಡೆಯಲಿದೆ.

ಹೊಸ ಆಚರಣೆ: ದತ್ತಪೀಠ ಹೋರಾಟ ಗಟ್ಟಿಗೊಳಿಸಲು ಕಳೆದ ಒಂದು ದಶಕದ ಹಿಂದೆ ಸಂಘ ಪರಿವಾರ ದತ್ತ ರಥಯಾತ್ರೆಯನ್ನು ಹಮ್ಮಿಕೊಂಡಿತ್ತು. ನಂತರದ ವರ್ಷಗಳಲ್ಲಿ ಕೈಬಿಟ್ಟಿತ್ತು. ಈ ಬಾರಿ ಮತ್ತೆ ರಥಯಾತ್ರೆ ಹಮ್ಮಿಕೊಂಡಿದ್ದು, ನ. 24ರಂದು ಮೂಡಿಗೆರೆ ತಾಲೂಕಿನ ಹೊರನಾಡಿನಲ್ಲಿ ಉದ್ಘಾಟನೆಗೊಂಡು 36 ಗ್ರಾಮಗಳಲ್ಲಿ ಸಂಚರಿಸಿ ಡಿ. 2 ರಂದು ಶೋಭಾಯಾತ್ರೆಯ ದಿನದಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಬೇಕಾಗಿತ್ತು.

ದತ್ತ ಪಾದುಕೆಗಳಿರುವ ರಥಯಾತ್ರೆ ನಡೆಸಲು ಅನುಮತಿ ನೀಡುವಂತೆ ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಯೋಗೀಶ್ ರಾಜ್ ಅರಸ್ ಅವರು ಜಿಲ್ಲಾ ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದರು. ಜಿಲ್ಲೆ ಅತಿ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಹಾಗೂ ಈದ್ ಮಿಲಾದ್ ಹಬ್ಬವೂ ಸಹ ಇರುವುದರಿಂದ ರಥಯಾತ್ರೆಗೆ ಅವಕಾಶ ನಿರಾಕರಿಸಲಾಗಿದೆ. ಇದರ ಜತೆಗೆ ಪೂರಕವಾದ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ಹಾಕಲಾಗಿದೆ.

31 ಚೆಕ್‌ಪೋಸ್ಟ್: ಶ್ರೀರಾಮ ಸೇನೆ ಇತ್ತೀಚೆಗೆ ನಡೆಸಿದ ದತ್ತಮಾಲಾ ಅಭಿಯಾನದ ವೇಳೆಯಲ್ಲಿ ತೆರೆಯಲಾಗಿದ್ದ ಚೆಕ್ ಪೋಸ್ಟ್‌'ಗಳು ಹಾಗೂ ವಿಶೇಷ ದಂಡಾಧಿಕಾರಿಗಳ ಸಂಖ್ಯೆಯನ್ನು ದತ್ತಜಯಂತಿ ಉತ್ಸವದ ಹಿನ್ನೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ವಿಶೇಷ ದಂಡಾಧಿಕಾರಿಗಳ ಸಂಖ್ಯೆ 33ರಿಂದ 48ಕ್ಕೆ ಏರಿಕೆಯಾಗಿದೆ. 31 ಚೆಕ್‌'ಪೋಸ್ಟ್‌'ಗಳ ಜತೆಗೆ 14 ಮಂದಿ ವಿಶೇಷ ದಂಡಾಧಿಕಾರಿಗಳನ್ನು ರಿಸರ್ವ್ ಇಟ್ಟುಕೊಳ್ಳಲಾಗಿದೆ. ಅಂದರೆ ಎಲ್ಲಾದರೂ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಂದರೆ ಅಂತಹ ಕಡೆಗಳಲ್ಲಿ ಈ ಅಧಿಕಾರಿಗಳನ್ನು ತಕ್ಷಣಕ್ಕೆ ನಿಯೋಜನೆ ಮಾಡಲು ಜಿಲ್ಲಾಡಳಿತ ಪೂರ್ವ ಸಿದ್ದತೆ ಮಾಡಿಕೊಂಡಿದೆ.