ಚಿಕ್ಕಬಳ್ಳಾಪುರ (ಮೇ. 14): ಬಾರದ ಮಳೆ ಮತ್ತು ಪಾತಾಳ ಸೇರಿದ ಅಂತರ್ಜಲದ ಪರಿಣಾಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವಿರಾರು ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಇನ್ನು ಸಿಗುತ್ತಿರುವ ಅಲ್ಪ ಸ್ವಲ್ಪ ನೀರಿನಲ್ಲೂ ಫ್ಲೋರೈಡ್ ಸೇರಿದಂತೆ ಇತರೆ ಲವಣಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಕುಡಿಯಲು ಅಯೋಗ್ಯವಾಗಿದೆ.

ಪರಿಸ್ಥಿತಿ ಹೀಗಿರುವಾಗ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮದ ಬಳಿ ಇರುವ ನೀರ ಚಿಲುಮೆಯೊಂದು ಸುತ್ತಮುತ್ತಲಿನ ಆರು ಗ್ರಾಮಗಳಿಗೆ ನೀರಿನ ಆಸರೆಯಾಗಿದೆ. ಸುಮಾರು 10 ಅಡಿ ಆಳದ ಗುಂಡಿಯೊಂದರ ಮುಂದೆ ರಾತ್ರಿ 12 ಗಂಟೆಯಾದರೂ ಶುದ್ಧ ಜಲಕ್ಕಾಗಿ ಜನರು ಸಾಲುಗಟ್ಟಿ ನಿಲ್ಲುತ್ತಾರೆ.

ಆಂಧ್ರ ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮದಿಂದ 3 ಕಿ.ಮೀ. ದೂರದಲ್ಲಿರುವ ಗುಬ್ಬೋಲ್ಲಪಲ್ಲಿ ಗ್ರಾಮ ಗುಡ್ಡಗಾಡು ಪ್ರದೇಶದಲ್ಲಿರುವ ಸಣ್ಣ ಹಳ್ಳಿ. ಈ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದ ತಪ್ಪಲಿನಲ್ಲಿ ಜೌಗುಪ್ರದೇಶವೊಂದಿದೆ.

ಇಲ್ಲಿ ಸುಮಾರು 10 ಅಡಿ ಆಳದ ಗುಂಡಿಯೊಂದನ್ನು ಗ್ರಾಮಸ್ಥರೇ ತೆಗೆದಿದ್ದಾರೆ. ಅಲ್ಲಿ ವರ್ಷದ 365 ದಿನವೂ ನೀರು ಜಿನುಗುತ್ತಲೇ ಇರುತ್ತದೆ ಎಂಬುದು ವಿಶೇಷ. ಹೀಗಾಗಿ ಸುತ್ತಮುತ್ತಲ ಐದಾರು ಗ್ರಾಮಗಳ ಜನರು ಪ್ರತಿನಿತ್ಯ ವಾಹನಗಳಲ್ಲಿ ಇಲ್ಲಿಗೆ ಬಂದು ನೀರು ಶೇಖರಿಸಿಕೊಂಡು ಹೋಗುವುದು ರೂಢಿಯಾಗಿದೆ.

ಸಿಹಿ ನೀರಿಗೆ ಜಾಗರಣೆ:

ಚಿಲುಮೆಯಲ್ಲಿ ಸಿಗುವ ನೀರು ಸಿಹಿಯಾಗಿದೆ. ಶುದ್ಧವಾಗಿದೆ ಎಂಬುದು ಈ ಗ್ರಾಮಗಳ ಜನರ ಅಭಿಪ್ರಾಯವಾಗಿದೆ. ಅಲ್ಲದೆ ಭೂಮಿಯ ಮೇಲ್ಪದರದಲ್ಲಿಯೇ ನೀರು ಜಿನುಗುತ್ತಿದೆ. ಈ ನೀರಿಗಾಗಿ ಸುಮಾರು ಆರು ಗ್ರಾಮಗಳ ಜನರು ಕಿಲೋಮೀಟರ್‌ಗಟ್ಟಲೆ ದೂರದಿಂದ ಆಗಮಿಸಿ ನೀರು ಶೇಖರಣೆಯಾಗುವವರೆಗೂ ಕಾದಿದ್ದು, ಬಿಂದಿಗೆಗಳಲ್ಲಿ ತುಂಬಿಕೊಂಡು ಹೋಗುತ್ತಾರೆ.

ಮುಂಜಾನೆಗೂ ಮೊದಲೇ ಬರುತ್ತಾರೆ:

ತಡವಾದರೆ ನೀರು ಸಿಗುವುದಿಲ್ಲ ಎಂಬ ಕಾರಣಕ್ಕೆ ಮುಂಜಾನೆ 4 ಗಂಟೆಗೂ ಮೊದಲೇ ಜನರು ಈ ಗುಂಡಿ ಬಳಿ ಆಗಮಿಸುತ್ತಾರೆ. ಮೊದಲು ಬಂದವರಿಗೆ ಶೇಖರಣೆಯಾಗಿರುವ ನೀರು ಹೆಚ್ಚು ಸಿಗಲಿದೆ. ನಂತರ ತಡವಾಗಿ ಬರುವವರು ನೀರು ಶೇಖರಣೆಯಾಗುವವರೆಗೂ ಕಾದು ನೀರು ತುಂಬಿಸಿಕೊಂಡು ಹೋಗುತ್ತಾರೆ. ಹೀಗೇ ಪ್ರತಿನಿತ್ಯ ಮಧ್ಯರಾತ್ರಿ 12 ಗಂಟೆಯಾದರೂ ಇಲ್ಲಿಗೆ ನೀರಿಗೆ ಬರುವವರ ಸಂಖ್ಯೆ ಬೆಳೆಯುತ್ತಲೇ ಇರುತ್ತದೆ.

ಅಪಾಯಕಾರಿ ಲವಣಾಂಶವಿಲ್ಲ:

ಬಾಗೇಪಲ್ಲಿ ತಾಲೂಕಿನಾದ್ಯಂತ ಕೊಳವೆ ಬಾವಿಗಳಲ್ಲಿ ಸಿಗುತ್ತಿರುವ ಅಲ್ಪ ಪ್ರಮಾಣದ ನೀರಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದ ಫೆä್ಲೕರೈಡ್‌ ಅಂಶ ಇರುವುದು ಬಹಿರಂಗವಾಗಿದೆ. ಹಾಗಾಗಿಯೇ ಈ ತಾಲೂಕಿನಲ್ಲಿ ಶೇ.80ಕ್ಕೂ ಹೆಚ್ಚು ಮಂದಿ ಫ್ಲೋರೋಸಿಸ್‌ ರೋಗದಿಂದ ಬಳಲುತ್ತಿದ್ದಾರೆ. ಇಂತಹ ಪ್ರದೇಶದಲ್ಲಿ 10 ಅಡಿ ಆಳದಲ್ಲಿಯೇ ನೀರು ಲಭ್ಯವಾಗುತ್ತಿದ್ದು, ಈ ನೀರಿನಲ್ಲಿ ಫೆä್ಲೕರೈಡ್‌ ಸೇರಿದಂತೆ ಯಾವುದೇ ಲವಣಾಂಶ ಇಲ್ಲ ಎಂಬುದು ಪರೀಕ್ಷೆಗಳಿಂದಲೇ ಬಹಿರಂಗವಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

- ಅಶ್ವತ್ ನಾರಾಯಣ್ ಎಲ್