ಬೆಂಗಳೂರಿನಲ್ಲಿ ಉತ್ಪಾದನೆ ಕುಸಿತ ಮತ್ತು ತಮಿಳುನಾಡಿನಲ್ಲಿನ ಪ್ರತಿಭಟನೆಯಿಂದಾಗಿ ಕೋಳಿ ಮಾಂಸದ ದರ ಕೆಜಿಗೆ ₹350 ತಲುಪಿದೆ. ಇದರೊಂದಿಗೆ ಕುರಿ, ಮೇಕೆ ಮಾಂಸದ ದರವೂ ಕೆಜಿಗೆ ₹900ಕ್ಕೆ ಏರಿಕೆಯಾಗಿದ್ದು, ಮಾಂಸ ಪ್ರಿಯರು ಹಾಗೂ ಹೋಟೆಲ್ ಗ್ರಾಹಕರಿಗೆ ಬಿಸಿ ತಟ್ಟಿದೆ.
ಬೆಂಗಳೂರು: ಉತ್ಪಾದನೆ ಕುಸಿತದಿಂದಾಗಿ ಕೊರತೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಕೋಳಿ ಮಾಂಸದ ದರ ಗಣನೀಯವಾಗಿ ಏರಿಕೆಯಾಗಿದೆ. ಇದರ ಜತೆಗೆ ತಮಿಳುನಾಡು, ಆಂಧ್ರ ಪ್ರದೇಶದಲ್ಲಿನ ಕೋಳಿ ಸಾಕಾಣಿಕೆದಾರರ ಪ್ರತಿಭಟನೆಯೂ ನಡೆಯುತ್ತಿದ್ದು ಬೆಲೆ ಏರಿಕೆಗೆ ಪುಷ್ಟಿ ನೀಡಿದೆ.
ಡಿಸೆಂಬರ್‌ನಲ್ಲಿ ಕೆಜಿಗೆ ₹ 200- ₹ 240 ಇದ್ದ ಕೋಳಿ ಮಾಂಸದ ಬೆಲೆ ಇದೀಗ ₹ 350 ವರೆಗೆ ತಲುಪಿದೆ. ಕೋಳಿ ಮಾಂಸ ಪ್ರಿಯರಿಗೆ ಬಿಸಿ ತಟ್ಟಿದ್ದು, ಹೋಟೆಲ್ ರೆಸ್ಟೊರೆಂಟ್‌ಗಳಲ್ಲೂ ಖಾದ್ಯಗಳ ದರ ಹೆಚ್ಚಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿ ಬಾಯ್ಲರ್ ಕೋಳಿಗೆ ₹180, ಫಾರಂ ಕೋಳಿಗೆ ₹ 120, ಗಿರಿರಾಜ ಕೋಳಿಗೆ ₹ 200 ಹಾಗೂ ಬಾಯ್ಲರ್ ರಿಟೇಲ್ ದರವನ್ನು ₹ 290 ಇದೆ. ಹಾಗೂ ವಿತ್ ಸ್ಕಿನ್ ₹ 315 ಹಾಗೂ ವಿತೌಟ್ ಸ್ಕಿನ್ ₹ 340 ನಿಗದಿಪಡಿಸಿದೆ. ಹೋಲ್‌ಸೇಲ್ ದರವೇ ಹೆಚ್ಚಾಗಿದೆ. ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಶನ್‌ನ ಹೋಲ್‌ಸೇಲ್ ದರವಾಗಿ ಕೇಜಿ ಬಾಯ್ಲರ್ ಕೋಳಿಗೆ ₹ 162, ಫಾರಂ ಕೋಳಿಗೆ ₹101, ಗಿರಿರಾಜ ಕೋಳಿಗೆ ₹185 ಹಾಗೂ ಬಾಯ್ಲರ್ ರಿಟೇಲ್ ದರವಿದೆ.
ಕುರಿ, ಮೇಕೆ ಮಾಂಸ ಕೆಜಿಗೆ ₹ 900
ಚಿಕನ್ ಪ್ರತಿ ಕೆಜಿಗೆ ಗರಿಷ್ಠ ₹ 340 ಏರಿಕೆಯಾಗಿದ್ದರೆ, ಇತ್ತ ಕುರಿ, ಮೇಕೆ ಮಾಂಸದ ದರ ಬೆಂಗಳೂರಿನಲ್ಲಿ ಪ್ರತಿ ಕೆಜಿಗೆ ₹ 800 - ₹ 900 ಗೆ ಏರಿಕೆಯಾಗಿದೆ. ಪ್ರತಿ ದಿನ ಮಾಂಸಾಹಾರ ಸೇವನೆ ಮಾಡುವವರು ಈ ಬೆಲೆಯಿಂದ ಕಂಗಾಲಾಗಿದ್ದಾರೆ. ಜತೆಗೆ ಚಿಕನ್, ಮಟನ್ ಸೇರಿ ಮಾಂಸಗಳ ಬಲೆ ಏರಿಕೆಯಿಂದ ಹೋಟೆಲ್ ಸೇರಿ ರೆಸ್ಟೋರೆಂಟ್‌ಗಳಲ್ಲಿ ಕಬಾಬ್, ಚಿಕನ್ ಫ್ರೈ, ಡ್ರೈ, ಮಟನ್, ಸೂಪ್ ಸೇರಿ ಮಾಂಸಾಹಾರ ದರ ಏರಿಕೆಯಾಗಿದೆ. ಇದರಿಂದ ಹೋಟೆಲ್ ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ.
ನಾಗಶೆಟ್ಟಿಹಳ್ಳಿ ಬಳಿಯ ಕರ್ನಾಟಕ ಚಿಕನ್ ಸೆಂಟರ್‌ನ ಮಹ್ಮದ್ ಯಾಸೀನ್ ಮಾತನಾಡಿ, ‘ ಚಿಕನ್ ದರ ಏರಿಕೆಯಾಗಿದೆ. ಹಾಗೆಂದು ಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಮುಂದಿನ ದಿನಗಳಲ್ಲಿ ದರ ತಹಬದಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮಿಳುನಾಡಲ್ಲಿ ಪ್ರತಿಭಟನೆ
ನಿರ್ವಹಣಾ ದರ ಹೆಚ್ಚಾದ ಹಿನ್ನೆಲೆಯಲ್ಲಿ ಸಾಕಣೆದಾರರು ಬಾಯ್ಲರ್ ಕೋಳಿಗೆ ಪ್ರತಿ ಕೆಜಿಗೆ ₹ 20, ನಾಟಿ ಕೋಳಿಗೆ ₹ೇ25 ನೀಡಬೇಕೆಂದು ಒತ್ತಾಯಿಸಿ ಕಂಪನಿಗಳ ವಿರುದ್ಧ ದರಣಿ ನಡೆಸುತ್ತಿದ್ದಾರೆ. ತಮಿಳುನಾಡಿನ ಪಲ್ಲಡಂ ಮತ್ತು ನಾಮಕ್ಕಲ್ ಭಾಗಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಿಗೆ ಪ್ರತಿದಿನ ಕೋಳಿ ಮಾಂಸ ಪೂರೈಕೆಯಾಗುತ್ತದೆ.
ಉತ್ಪಾದನೆ ಕುಸಿತವೇ ಬೆಲೆ ಏರಿಕೆಗೆ ನಿಜವಾದ ಕಾರಣ
ತಮಿಳುನಾಡಿನ ಪ್ರತಿಭಟನೆಯಿಂದಾಗಿ ನಮ್ಮಲ್ಲಿ ದರ ಏರಿಕೆಯಾಗಿಲ್ಲ. ಬದಲಾಗಿ, ಇಲ್ಲಿಯೇ ಉತ್ಪಾದನೆ ಕುಸಿದಿದ್ದರಿಂದ ಬೆಲೆ ಏರಿತ್ತು. ಈಗ ಉತ್ಪಾದನೆ ಹೆಚ್ಚಳವಾಗುತ್ತಿದ್ದು, ದರ ಇಳಿಕೆಯಾಗಲಿದೆ.
ಕೆ.ಎನ್.ನಾಗರಾಜು, ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಶನ್


