ಮುಂಬೈ: 1993ರ ಮುಂಬೈ ಸ್ಫೋಟ ಪ್ರಕರಣದ ರೂವಾರಿ, ದಾವೂದ್ ಇಬ್ರಾಹಿಂ ಪುತ್ರ ಪಾಕಿಸ್ತಾನದಲ್ಲಿ ಮೌಲಾನಾ ( ಧಾರ್ಮಿಕ ಪ್ರವಚಕ)  ಆದ ಬೆನ್ನಲ್ಲೇ, ದಾವೂದ್‌ನ ಬಂಟ ಛೋಟಾ ಶಕೀಲ್‌ನ ಏಕೈಕ ಪುತ್ರನೂ ಅಧ್ಯಾತ್ಮದ ಹಾದಿ ಹಿಡಿದಿದ್ದಾನೆ. ಛೋಟಾ ಶಕೀಲ್‌ನ ಏಕಮಾತ್ರ ಪುತ್ರ ಮುದಾಶೀರ್ ಶೇಖ್ ‘ಹಫೀಜ್ ಎ ಕುರಾನ್’ ಆಗಿದ್ದಾನೆ. ಕುರಾನ್‌ನಲ್ಲಿ 6236 ಶ್ಲೋಕಗಳಿದ್ದು, ಅದೆಲ್ಲವನ್ನೂ ಅಭ್ಯಾಸ ಮಾಡಿ ನೆನಪಿನಲ್ಲಿಟ್ಟು ಕೊಂಡವರನ್ನು ಹಫೀಜ್ ಎ ಕುರಾನ್ ಎಂದು ಕರೆಯಲಾಗುತ್ತದೆ.

ಛೋಟಾ ಶಕೀಲ್ ಜತೆಗೇ ನೆಲೆಸಿರುವ ಮುದಾಶೀರ್, ಕರಾಚಿ ಸುತ್ತಮುತ್ತಲ ಪ್ರದೇಶಗಳಲ್ಲಿ ಜನರಿಗೆ ಕುರಾನ್ ಬೋಧನೆ ಮಾಡುತ್ತಿದ್ದಾನೆ. ‘ಮುದಾಶೀರ್’ ಎಂದರೆ ಒಳ್ಳೆಯದರ ಮುನ್ಸೂಚನೆ. ಆದರೆ ಶಕೀಲ್ ಪಾಲಿಗೆ ಮಗನ ಅಧ್ಯಾತ್ಮ ಪ್ರೇಮ ಚಿಂತೆಯಾಗಿ ಕಾಡುತ್ತಿದೆ.

ಭಾರತದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಕಳ್ಳ ವ್ಯವಹಾರ ನಡೆಸಿ ಸಂಪಾದಿಸಿರುವ ಆಸ್ತಿಗೆ ವಾರಸುದಾರನಾಗಿರುವ ಶಕೀಲ್‌ಗೆ ತನ್ನ ಏಕಮಾತ್ರ ಪುತ್ರ ಅಧ್ಯಾತ್ಮದ  ಹಾದಿ ಹಿಡಿದಿರುವುದರಿಂದ ಬೇಸರವಾಗಿದೆ ಎಂದು ಹೇಳಲಾಗಿದೆ.