ಸರ್ಕಾರಿ ಸ್ವಾಮ್ಯದ ಏರ್‌ಪೋರ್ಟ್‌ಗಳಲ್ಲಿ ಅಗ್ಗದ ದರದಲ್ಲಿ ಪಾನೀಯ ಮತ್ತು ಆಹಾರ ಉತ್ಪನ್ನ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಪಾನೀಯ ಮತ್ತು ಆಹಾರ ಉತ್ಪನ್ನಗಳಿಗೆ ಭಾರೀ ದರ ವಿಧಿಸುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ಏರ್‌ಪೋರ್ಟ್‌ಗಳಲ್ಲಿ ಅಗ್ಗದ ದರದಲ್ಲಿ ಪಾನೀಯ ಮತ್ತು ಆಹಾರ ಉತ್ಪನ್ನ ವಿತರಿಸಲು ನಿರ್ಧರಿಸಿದೆ. ಇದಕ್ಕೆಂದೇ ಪ್ರತ್ಯೇಕ ಕೌಂಟರ್‌ ತೆರೆಯುವುದಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಶನಿವಾರ ತಿಳಿಸಿದೆ.

ಆದರೆ ಈ ಹೊಸ ಸವಲತ್ತು ಖಾಸಗಿ ಪಾಲುದಾರಿಕೆಯಲ್ಲಿ ನಿರ್ವಹಿಸುವ ಬೆಂಗಳೂರು, ದೆಹಲಿ, ಮುಂಬೈಯಂತಹ ಬೃಹತ್‌ ವಿಮಾನ ನಿಲ್ದಾಣಗಳಿಗೆ ಅನ್ವಯವಾಗದು. ಉಳಿದಂತೆ ದೇಶದ 90 ವಿಮಾನ ನಿಲ್ದಾಣಗಳಲ್ಲಿ ಈ ಪ್ರತ್ಯೇಕ ಕೌಂಟರ್‌ ಲಭ್ಯವಾಗಲಿವೆ ಎಂದು ಪ್ರಾಧಿಕಾರ ತಿಳಿಸಿದೆ.

ಏರ್‌ಪೋರ್ಟ್‌ಗಳಲ್ಲಿ ಪಾನೀಯ, ಆಹಾರಕ್ಕೆ ಭಾರೀ ದರ ವಿಧಿಸುವ ಬಗ್ಗೆ ಈ ಹಿಂದೆ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಸಂಸತ್‌ನಲ್ಲೂ ಈ ವಿಷಯ ಚರ್ಚೆಗೆ ಬಂದಿತ್ತು.