ನಂಜನಗೂಡು[ಮಾ.20]: ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಶ್ರೀಕಂಠೇಶ್ವರ ಸ್ವಾಮಿಯವರ ಗೌತಮ ಪಂಚ ಮಹಾರಥೋತ್ಸವವು ಮಂಗಳವಾರ ಲಕ್ಷಾಂತರ ಭಕ್ತಾರ ಜಯಘೋಷ ಉದ್ಘೋಷಗಳ ನಡುವೆ ವಿಜೃಂಭಣೆ ನೆರವೇರಿತು.

ಆದರೆ, ಗೌತಮ ರಥಕ್ಕೆ ಹಳೆಯ ಹಗ್ಗವನ್ನು ಬಳಕೆ ಮಾಡಿದ್ದರಿಂದಾಗಿ ರಥ ಸ್ಥಳ ಬಿಡುವ ಮುನ್ನವೇ ಹಗ್ಗ ತುಂಡಾಯಿತು. ಬೇರೆ ಹಗ್ಗ ಕಟ್ಟಲು ಒಂದು ತಾಸು ತಡವಾಯಿತು, ನಂತರವೂ ಆ ಹಗ್ಗ ಸಹ ತುಂಡಾಯಿತು. ಇದಾದ ಬಳಿಕ ಕಟ್ಟಿದ ಹಗ್ಗದ ಕಥೆಯೂ ಇದೇ ಆಗಿ, ರಥ ಒಂದಿಂಚು ಸಹ ಕದಲಿಲ್ಲ. ಕೊನೆಗೆ ಸಣ್ಣ ಹಗ್ಗವೊಂದನ್ನು ರಥಕ್ಕೆ ಕಟ್ಟಿದರೂ, ಭಕ್ತರಿಗೆ ರಥವನ್ನು ಎಳೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಮುಂಬದಿಯಿಂದ 2 ಕ್ರೇನ್‌, ಹಿಂಬದಿ 2 ಜೆಸಿಬಿಗಳನ್ನು ಬಳಕೆ ಮಾಡಿ ರಥಕ್ಕೆ ಚಾಲನೆ ನೀಡಲಾಯಿತು.

ಇದರಿಂದ 6.40ರಿಂದ 7 ಗಂಟೆಯೊಳಗೆ ಚಾಲನೆ ನೀಡಬೇಕಿದ್ದ ರಥಕ್ಕೆ 9.30ರ ವೇಳೆಗೆ ಚಾಲನೆ ದೊರಕಿತು. 2.30 ತಾಸು ವಿಳಂಬವಾಗಿ ರಥೋತ್ಸವ ಆರಂಭಗೊಂಡಿತು.

ಮೊದಲು ಗಣಪತಿ ರಥ, ನಂತರ ಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡ ರಥ (ಗೌತಮ ರಥ), ಇದರ ಹಿಂದೆ ಚಂಡಿಕೇಶ್ವರಸ್ವಾಮಿ, ಸುಬ್ರಮಣ್ಯಸ್ವಾಮಿ ಮತ್ತು ಕೊನೆಯಲ್ಲಿ ಶ್ರೀ ಪಾರ್ವತಮ್ಮನವರ ರಥಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ಮಧ್ಯಾಹ್ನ 1.30ರ ವೇಳೆಗೆ ಸ್ವಸ್ಥಾನ ಸೇರಿದವು.

ಐದು ರಥಗಳು ರಥದ ಬೀದಿಗಳಲ್ಲಿ ಚಲಿಸುವಾಗ ಭಕ್ತರು ರಥಕ್ಕೆ ಹಣ್ಣು-ದವನ ಎಸೆದು ಹರಕೆ ತೀರಿಸಿದರು.