ಚನ್ನರಾಯಪಟ್ಟಣ [ಜೂ.27] :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಮತ್ತೆ ಆರಂಭವಾಗಿದ್ದಾಯ್ತು, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ನಾವು ಸಹ ಗ್ರಾಮ ವಾಸ್ತವ್ಯ ಮಾಡುವುದಾಗಿ ಘೋಷಿಸಿದ್ದೂ ಆಯ್ತು. ಇದೀಗ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ವೊಬ್ಬರು ಸದ್ದಿಲ್ಲದೇ ಗ್ರಾಮ ವಾಸ್ತವ್ಯ ಮಾಡಿದ್ದು, ರಾತ್ರಿಯಿಡೀ ಗ್ರಾಮದಲ್ಲಿ ಉಳಿದು ಜನರ ದೂರುಗಳನ್ನು ಆಲಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಠಾಣೆಯ ಪಿಎಸ್‌ಐ ಮಂಜುನಾಥ್‌, ಗ್ರಾಮವಾಸ ಮಾಡಿದ ಪೊಲೀಸ್‌ ಅಧಿಕಾರಿ. ಮಂಗಳವಾರ ರಾತ್ರಿ ಚನ್ನರಾಯಪಟ್ಟಣ ತಾಲೂಕಿನ ಗುಳಸಿಂದ ಗ್ರಾಮಕ್ಕೆ ಮಂಗಳವಾರ ರಾತ್ರಿ 9ರ ವೇಳೆಗೆ ಆಗಮಿಸಿದ ಪಿಎಸ್‌ಐ ಮಂಜುನಾಥ್‌, ಗ್ರಾಮದ ಲಕ್ಷ್ಮೇನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರೊಂದಿಗೆ ಕುಳಿತು ಮುಕ್ತವಾಗಿ ಮಾತನಾಡಿದರು. ಈ ವೇಳೆ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ ಗ್ರಾಮಸ್ಥರಿಂದ ದೂರುಗಳನ್ನು ಆಲಿಸಿ, ಅವುಗಳಿಗೆ ಪರಿಹಾರದ ವ್ಯವಸ್ಥೆ ಮಾಡಿದರು.

ಈ ವೇಳೆ ಮಾತನಾಡಿದ ಎಸ್‌ಐ ಮಂಜುನಾಥ್‌, ತಿಂಗಳಲ್ಲಿ ಎರಡು ಬಾರಿ ಗ್ರಾಮಗಳಲ್ಲಿ ಮೊಕ್ಕಾಂ ಹೂಡಿ ಜನರ ಸಮಸ್ಯೆ ತಿಳಿದು ಜನರೊಂದಿಗೆ ಬೆರೆಯಬೇಕು ಎಂಬ ಇಲಾಖೆ ಆದೇಶವನ್ನು ಪಾಲಿಸುವ ಪ್ರಯತ್ನ ಇದಾಗಿದೆ. ಇದನ್ನು ಮುಂದುವರೆಸುತ್ತೇನೆ ಎಂದರು.