ನವದೆಹಲಿ(ಆ.25): ರಾಮ್ ಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ವಾಜಪೇಯಿ ಹೆಸರು ಪ್ರಸ್ತಾವಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಕುರಿತು ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ  ವಾಗ್ದಾಳಿ ನಡೆಸಿದ್ದು, ಬೇಕಾದರೆ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಿ ರಾಮಲೀಲಾ ಮೈದಾನದ ಹೆಸರನ್ನಲ್ಲ ಎಂದು ಹರಿಹಾಯ್ದಿದ್ದಾರೆ.

ರಾಮಲೀಲಾ ಮೈದಾನಕ್ಕೆ ವಾಜಪೇಯಿ ಹೆಸರು ಇಡುವುದರಿಂದ ಬಿಜೆಪಿಗೆ ಮತ ಬರುತ್ತದೆ ಎಂದು ಮೋದಿ ನಂಬಿದ್ದರೆ ಅದು ಅವರ ಮೂರ್ಖತನ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

ಇದೇ ವೇಳೆ ರಾಮಲೀಲಾ ಮೈದಾನಕ್ಕೆ ಅಟಲ್ ಹೆಸರು ಇಡುವ ಯಾವುದೇ ಪ್ರಸ್ತಾವ ತನ್ನ ಮುಂದಿಲ್ಲ ಎಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಸ್ಪಷ್ಟನೆ ನೀಡಿದೆ. ಹೆಸರು ಬದಲಾವಣೆ ಪ್ರಸ್ತಾವ ಕುರಿತ ವರದಿಯನ್ನು ತಳ್ಳಿಹಾಕಿರುವ  ಉತ್ತರ ದೆಹಲಿ ಮೇಯರ್ ಅದೇಶ್ ಗುಪ್ತಾ , ಇಂತಹ ಯಾವುದೇ ಪ್ರಸ್ತಾವ ಇಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಇನ್ನು ರಾಮಲೀಲಾ ಮೈದಾನದ ಹೆಸರು ಬದಲಾಯಿಸುವ ಯಾವುದೇ ಪ್ರಸ್ತಾವನೆ ಪಕ್ಷದಲ್ಲಿ ಇಲ್ಲ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಕೂಡಾ ಹೇಳಿದ್ದಾರೆ. ರಾಮನನ್ನು ನಾವು ಪೂಜಿಸುತ್ತೇವೆ. ಕೆಲ ಜನರು ರಾಜಕೀಯ ದುರುದ್ದೇಶದಿಂದ ಹೆಸರು ಬದಲಾವಣೆ ಮಾಡುವ ವದಂತಿ ಹಬ್ಬಿದ್ದಾರೆ  ಎಂದು ಮನೋಜ್ ತಿವಾರಿ ತಿಳಿಸಿದ್ದಾರೆ.