Asianet Suvarna News Asianet Suvarna News

ನಾಯ್ಡುಗೆ ಆಘಾತ: ಸಿಎಂ ಕುರ್ಚಿ ಹೋಯ್ತು, ಈಗ ಮನೆಯೂ ಕಳೆದುಕೊಳ್ಳುವ ಸರದಿ!

ಆಂಧ್ರಪ್ರದೇಶ ಸಿಎಂಗೆ ಮತ್ತೊಂದು ಆಘಾತ| ಸಿಎಂ ಕುರ್ಚಿ ಹೋಯ್ತು, ವಿಐಪಿ ಸೌಲಭ್ಯವೂ ನಿಂತಿತು, ಈಗ ಮನೆ, ಕಚೇರಿ ಕಳೆದುಕೊಳ್ಳುವ ಸರದಿ!

Chandrababu Naidu will be evicted from Undavalli house YSRC MLA
Author
Bangalore, First Published Jun 20, 2019, 2:49 PM IST

ಅಮರಾವತಿ[ಜೂ.20]: ಆಂಧ್ರ ಪ್ರದೇಶದ ಮಾಜಿ ಸಿಎಂ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಗೆ ಒಂದಾದ ಬಳಿಕ ಮತ್ತೊಂದರಂತೆ ಆಘಾತಕಾರಿ ಸುದ್ದಿ ಸಿಗುತ್ತಿದೆ. ಆರಂಭದಲ್ಲಿ ಸಿಎಂ ಕುರ್ಚಿ ಕಳೆದುಕೊಂಡ ನಾಯ್ಡುಗೆ ವಿಐಪಿ ಸೌಲಭ್ಯವನ್ನೂ ನಿಲ್ಲಿಸಲಾಗಿತ್ತು. ಆದರೀಗ ಇವೆಲ್ಲದರ ಬೆನ್ನಲ್ಲೇ  ಅವರು ತಮ್ಮ ಮನೆ ಹಾಗೂ ಪಕ್ಷದ ಕಚೇರಿಯನ್ನೂ ತೊರೆಯುವ ಸಾಧ್ಯತೆಗಳಿವೆ. 

ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಶಾಸಕ ಹಾಗೂ ಆಂಧ್ರಪ್ರದೇಶದ ರಾಜ್ಯ ರಾಜಧಾನಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿರುವ ಅಲ್ಲಾ ರಾಮಕೃಷ್ಣ ಇಂತಹುದ್ದೊಂದು ಮಾಹಿತಿ ಬಹಿರಂಗಪಡಿಸಿದ್ದಾರೆ. ಇದರ ಹಿಂದಿನ ಕಾರಣವನ್ನೂ ತಿಳಿಸಿರುವ ರಾಮಕೃಷ್ಣ ಉಂದವಲ್ಲಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಅಕ್ರಮವಾಗಿ ನಿರ್ಮಿಸಿರುವ 60 ಕಟ್ಟಡಗಳನ್ನು ತೆರವುಗೊಳಿಸಲು ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಮಾಜಿ ಸಿಎಂ ನಾಯ್ಡು ಉಳಿದುಕೊಂಡಿರುವ ಬಾಡಿಗೆ ಮನೆ ಕೂಡಾ ಇದೇ ಪ್ರದೇಶದಲ್ಲಿರುವುದರಿಂದ ಅವರು ಮನೆ ಖಾಲಿ ಮಾಡಬೇಕಾಗುತ್ತದೆ ಎಂದಿದ್ದಾರೆ.

ಇಷ್ಟೇ ಅಲ್ಲದೇ ಚಂದ್ರಬಾಬು ನಾಯ್ಡು ಜನರನ್ನು ಭೇಟಿಯಾಗಲು ಹಾಗೂ ಪಕ್ಷದ ಚಟುವಟಿಕೆಗಳಿಗಾಗಿ ನಿರ್ಮಿಸಿರುವ 'ಪ್ರಜಾ ವೇದಿಕೆ'ಯ ಕಟ್ಟಡವೂ ಈ ನದಿ ಪ್ರದೇಶದಲ್ಲೇ ಇದೆ. ಹೀಗಾಗಿ ಮನೆಯೊಂದಿಗೆ ಅವರು ತಮ್ಮ ಕಚೇರಿಯನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇನ್ನು ಚಂದ್ರಬಾಭು ನಾಯ್ಡು ಪಕ್ಷದ ಚಟುವಟಿಕೆಗಳಿಗಾಗಿ ಈ ಜಾಗ ಬಿಟ್ಟುಕೊಡಬೇಕೆಂದು ಮಾಜಿ ಸಿಎಂ ನಾಯ್ಡು ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎನ್ನಲಾಗಿದೆ.

ಚಂದ್ರಬಾಬು ನಾಯ್ಡು VIP ಕಲ್ಚರ್ ಗೆ ಬ್ರೇಕ್

ಇವೆಲ್ಲದರ ಬೆನ್ನಲ್ಲೇ ರಾಜಧಾನಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿರುವ ಅಲ್ಲಾ ರಾಮಕೃಷ್ಣ ಟ್ವೀಟ್ ಒಂದನ್ನು ಮಾಡುತ್ತಾ ನಾಯ್ಡುಗೆ ತಿವಿದಿದ್ದಾರೆ. 'ಇಡೀ ಜಗತ್ತನ್ನು ಅಮರಾವತಿಗೆ ತರಲು ನಾಯ್ಡು ಬಯಸಿದ್ದರು. ಆದರೆ ತಮಗಾಗಿ ಒಂದು ಮನೆ ಕಟ್ಟಿಕೊಳ್ಳಲು ಅವರು ಮರೆತಂತೆ ಭಾಸವಾಗುತ್ತದೆ' ಎಂದಿದ್ದಾರೆ.

ಈಗಾಗಲೇ ಯಾರ ಮನೆಯಾದರೂ ಅದು ಅಕ್ರಮವಾಗಿ ನಿರ್ಮಿಸಿದ್ದಾದರೆ ಅದನ್ನು ನೆಲಸಮಗೊಳಿಸುವುದಾಗಿ ಸರ್ಕಾರ ಸಾರ್ವಜನಿಕವಾಗಿ ಘೋಷಿಸಿದೆ. ಹೀಗಿರುವಾಗ ಚಂದ್ರಬಾಬು ನಾಯ್ಡು ಮನೆ ಖಾಲಿ ಮಾಡುತ್ತಾರಾ ಅಥವಾ ಕಾನೂನಿನ ಸಹಾಯ ಪಡೆಯುತ್ತಾರಾ ಕಾದು ನೋಡಬೇಕಿದೆ.

Follow Us:
Download App:
  • android
  • ios