ಅಧ್ಯಕ್ಷೀಯ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ, ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ರಾಹುಲ್ ಮುಂದಿರುವ ಸವಾಲುಗಳೇನು?

ನವದೆಹಲಿ: ಅಧ್ಯಕ್ಷೀಯ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ, ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ರಾಹುಲ್ ಮುಂದಿರುವ ಸವಾಲುಗಳೇನು?

1 ಕಾಂಗ್ರೆಸ್ಸಿನ ಹಿರಿಯ ತಲೆಗಳಿಗೆ ರಾಹುಲ್ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಇರುವುದು ಸುಳ್ಳಲ್ಲ. ಹೀಗಾಗಿ ರಾಹುಲ್ ಅವರು ಯುವಕರು ಹಾಗೂ ಹಿರಿಯರ ನಡುವೆ ಸಮತೋಲನ ಸಾಧಿಸಬೇಕಾಗಿದೆ.

2 2014ರ ಲೋಕಸಭೆ ಚುನಾವಣೆಯಿಂದ ಈವರೆಗೆ ಕಾಂಗ್ರೆಸ್ ಸತತವಾಗಿ ಸೋಲುಗಳನ್ನು ಕಂಡಿದೆ. ಕಾರ್ಯಕರ್ತರು ನೈರ್ತಿಕ ಸ್ಥೈರ್ಯ ಕಳೆದುಕೊಂಡಿದ್ದಾರೆ. ಅವರನ್ನು ಹುರಿದುಂಬಿಸಿ ಪಕ್ಷವನ್ನು ಮೇಲಕ್ಕೆತ್ತಬೇಕಾಗಿದೆ.

3 ಮುಂದಿನ ವರ್ಷ ರಾಹುಲ್‌ಗೆ ನಿಜಕ್ಕೂ ಅಗ್ನಿಪರೀಕ್ಷೆ. ಕಾಂಗ್ರೆಸ್ ಆಳ್ವಿಕೆಯಲ್ಲಿರುವ ಕರ್ನಾಟಕವನ್ನು ಉಳಿಸಿಕೊಳ್ಳಬೇಕು. ಜತೆಗೆ ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಗದ್ದುಗೆ ಹಿಡಿಯಬೇಕು.

4 ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೇರಬೇಕಾದರೆ ರಾಜ್ಯ ಘಟಕಗಳನ್ನು ಬಲಪಡಿಸಬೇಕು. ಆದರೆ ನಾಯಕರ ಒಳಜಗಳ ಅದಕ್ಕೆ ಅಡ್ಡಿಯಾಗಿದೆ. ಇದನ್ನು ರಾಹುಲ್ ನಿರ್ವಹಿಸಬೇಕಾಗಿದೆ.

5 ಉತ್ತರಪ್ರದೇಶ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಸ್ಥಿತಿ ಗಂಭೀರವಾಗಿದೆ.

6 ಮಧ್ಯಮವರ್ಗ, ಯುವಕರು ಹಾಗೂ ಶ್ರೀಸಾಮಾನ್ಯರು ಕಾಂಗ್ರೆಸ್ಸಿಂದ ದೂರವಾಗಿದ್ದಾರೆ. ಅವರನ್ನು ಮತ್ತೆ ಪಕ್ಷದತ್ತ ಆಕರ್ಷಿಸಬೇಕಾಗಿದೆ.

7 2019ರ ಲೋಕಸಭೆ ಚುನಾವಣೆಗೆ ಕೇವಲ 16 ತಿಂಗಳುಗಳು ಇವೆ. ಅಷ್ಟರಲ್ಲಿ ಬಿಜೆಪಿಗೆ ತಾನು ಪ್ರಬಲ ಪರ್ಯಾಯ ಪಕ್ಷ ಎಂಬುದನ್ನು ಕಾಂಗ್ರೆಸ್ ನಿರೂಪಿಸಬೇಕು.

8 ಬಿಜೆಪಿಯನ್ನು ಏಕಾಂಗಿಯಾಗಿ ಮಣಿಸುವುದು ಸದ್ಯದ ಮಟ್ಟಿಗೆ ಕಠಿಣ ಗುರಿಯಾಗಿರುವುದರಿಂದ ಹಾಗೂ ಪ್ರತಿಪಕ್ಷಗಳ ನಡುವೆ ಮತವಿಭಜನೆ ತಪ್ಪಿಸುವ ಸಲುವಾಗಿ ಮಿತ್ರ ಪಕ್ಷಗಳನ್ನು ಹುಡುಕಬೇಕು.

9 2004ರಲ್ಲಿ ಸೋನಿಯಾ ಗಾಂಧಿ ಅವರು ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸಿದ್ದರು. ಈಗ ರಾಹುಲ್ ಕೂಡ ತಾಳ್ಮೆಯಿಂದ ಅದೇ ಕೆಲಸ ನಿರ್ವಹಿಸಬೇಕು.