ಪ್ರಧಾನಿ ನರೇಂದ್ರ ಮೋದಿ ಅವರ ಚಹಾ ವ್ಯಾಪಾರಿ ಹಿನ್ನೆಲೆಯ ಬಗ್ಗೆ ಅಣಕವಾಡಿ ಯುವ ಕಾಂಗ್ರೆಸ್ ಟ್ವೀಟರ್‌ನಲ್ಲಿ ಮಾಡಿದ್ದ ‘ಮೀಮ್’ ಅನ್ನು ಬಿಜೆಪಿ ಇದೀಗ ಗುಜರಾತ್‌ನಲ್ಲಿ ಚುನಾವಣಾ ಅಸ್ತ್ರ ಮಾಡಿಕೊಂಡಿದೆ.
ನವದೆಹಲಿ (ನ.26): ಪ್ರಧಾನಿ ನರೇಂದ್ರ ಮೋದಿ ಅವರ ಚಹಾ ವ್ಯಾಪಾರಿ ಹಿನ್ನೆಲೆಯ ಬಗ್ಗೆ ಅಣಕವಾಡಿ ಯುವ ಕಾಂಗ್ರೆಸ್ ಟ್ವೀಟರ್ನಲ್ಲಿ ಮಾಡಿದ್ದ ‘ಮೀಮ್’ ಅನ್ನು ಬಿಜೆಪಿ ಇದೀಗ ಗುಜರಾತ್ನಲ್ಲಿ ಚುನಾವಣಾ ಅಸ್ತ್ರ ಮಾಡಿಕೊಂಡಿದೆ.
ಮೋದಿ ಅವರ 38 ನೇ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಭಾನುವಾರ ಪ್ರಸಾರವಾಗಲಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿ ಆದಿಯಾಗಿ ಹಲವು ನಾಯಕರು ಜನರೊಂದಿಗೆ ಚಹಾ ಹೀರುತ್ತಾ ಕಾರ್ಯಕ್ರಮ ಆಲಿಸಲು ಉದ್ದೇಶಿಸಿ ದ್ದಾರೆ. ‘ಮನ್ ಕೀ ಬಾತ್- ಚಾಯ್ ಕೇ ಸಾಥ್’ ಎಂಬ ಹೆಸರನ್ನು ಈ ಕಾರ್ಯಕ್ರಮಕ್ಕೆ ಇಡಲಾಗಿದೆ. ಗುಜರಾತಿನ 182 ವಿಧಾನಸಭಾ ಕ್ಷೇತ್ರಗಳಲ್ಲಿರುವ ಎಲ್ಲ 50128 ಬೂತ್ಗಳಲ್ಲೂ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ಉಮಾ ಭಾರತಿ, ಸ್ಮತಿ ಇರಾನಿ, ಸಿಎಂ ವಿಜಯ್ ರೂಪಾನಿ ಸೇರಿದಂತೆ ಹಲವಾರು ನಾಯಕರು ಭಾಗವಹಿಸಲಿದ್ದಾರೆ. ಯುವ ಕಾಂಗ್ರೆಸ್, ‘ಯುವ ದೇಶ್’ ಎಂಬ ನಿಯತಕಾಲಿಕೆ ಹೊರತರುತ್ತಿದ್ದು, ಆ ಪತ್ರಿಕೆಗೆ ಟ್ವೀಟರ್ ಅಕೌಂಟ್ ಹೊಂದಿದೆ. ಅದರಲ್ಲಿ ಮೋದಿ ಚಹಾ ವ್ಯಾಪಾರಿ ಹಿನ್ನೆಲೆ ಬಗ್ಗೆ ಅಣಕವಾಡಲಾಗಿತ್ತು. 2014 ರ ಲೋಕಸಭೆ ಚುನಾವಣೆ ವೇಳೆ, ಮಾಜಿ ಚಹಾ ವ್ಯಾಪಾರಿಯಾಗಿರುವ ಮೋದಿ ಈ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಹೇಳಿದ್ದರು. ಅದನ್ನೇ ರಾಜಕೀಯ ಅಸ್ತ್ರ ಮಾಡಿಟ್ಟುಕೊಂಡಿದ್ದ ಮೋದಿ ಅವರು ಚುನಾವಣೆ ಪ್ರಚಾರ ಸಂದರ್ಭದಲ್ಲಿ ‘ಚಾಯ್ ಪೇ ಚರ್ಚಾ’ ಎಂಬ ಕಾರ್ಯಕ್ರಮ ಆರಂಭಿಸಿ ಗಮನಸೆಳೆದಿದ್ದರು.
