ಬೆಂಗಳೂರು (ಏ. 30): ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರಾಜ್ಯಾದ್ಯಂತ ಸೋಮವಾರ ಸುಗಮವಾಗಿ ನಡೆದಿದೆ.

ರಾಜ್ಯಾದ್ಯಂತ ಒಟ್ಟಾರೆ 1.94 ಲಕ್ಷ ವಿದ್ಯಾರ್ಥಿ ಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಜೀವಶಾಸ್ತ್ರದಲ್ಲಿ ಶೇ. 75.90 ಹಾಗೂ ಗಣಿತದಲ್ಲಿ ಶೇ.91.72ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ರಾಜ್ಯದ 431 ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಯಾವುದೇ ರೀತಿಯ ತೊಂದರೆಗಳು ಉಂಟಾಗಿಲ್ಲ

ಜೀವಶಾಸ್ತ್ರ ಸುಲಭ, ಗಣಿತ ಕಷ್ಟ: ಜೀವಶಾಸ್ತ್ರ ವಿಷಯ ಸುಲಭವಾಗಿತ್ತು. ಗಣಿತ ಸ್ವಲ್ಪ ಕಷ್ಟಕರವಾ ಗಿದ್ದರಿಂದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಾಗಿಲ್ಲ. ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿಯೇ ಎಲ್ಲ ಪ್ರಶ್ನೆಗಳನ್ನು ನೀಡಿದ್ದರಿಂದ ಉತ್ತರಿಸಲು ಸಹಕಾರಿಯಾಯಿತು ಎಂದು ದೀಕ್ಷಾ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಅಭಿಪ್ರಾಯಪಟ್ಟರು.

ಜೀವಶಾಸ್ತ್ರದಲ್ಲಿ 60 ಅಂಕಗಳಲ್ಲಿ 50 ಕ್ಕೂ ಹೆಚ್ಚಿನ ಅಂಕ ಗಳಿಸಬಹುದು. ಆದರೆ, ಗಣಿತದಲ್ಲಿ 40 ಕ್ಕಿಂತ ಹೆಚ್ಚಿನ ಅಂಕ ಗಳಿಸಲು ಕಷ್ಟ. ಪ್ರಶ್ನೆಗಳು ತುಂಬಾ ಕಠಿಣವಾಗಿದ್ದರಿಂದ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆಯಲು ಸಮಯ ಸಾಕಾಗಲಿಲ್ಲ. ಪ್ರಶ್ನೆಗಳು ಉದ್ದುದ್ದವಾಗಿ ನೀಡಿದ್ದರಿಂದ ಓದಿಕೊಂಡು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಯಿತು ಎಂದು ನಾರಾಯಣ ಕಾಲೇಜಿನ ವಿದ್ಯಾರ್ಥಿ ಯೋಗೇಶ್ ತಿಳಿಸಿದರು.