2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ಅತ್ಯಂತ ಬೃಹತ್ ಯೋಜನೆಗಳಲ್ಲಿ ‘ಭಾರತಮಾಲಾ’ ಒಂದಾಗಿದ್ದು, ದೇಶದ ಎರಡನೇ ಅತಿದೊಡ್ಡ ಹೆದ್ದಾರಿ ಕಾರ್ಯಕ್ರಮವಾಗಿದೆ. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎನ್‌ಎಚ್‌ಡಿಪಿ)ಯಡಿ 50 ಸಾವಿರ ಕಿ.ಮೀ. ಹೆದ್ದಾರಿಯನ್ನು ಜಾಗತಿಕ ಗುಣಮಟ್ಟಗಳಿಗೆ ಅನುಗುಣವಾಗಿ ನಿರ್ಮಿಸಿತ್ತು.
ನವದೆಹಲಿ(ಏ.18): ದೇಶದ ಹೆದ್ದಾರಿಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ‘ಭಾರತಮಾಲಾ’ ಎಂಬ ಸಮಗ್ರ ರಸ್ತೆ ಯೋಜನೆಯೊಂದನ್ನು ಬರೋಬ್ಬರಿ 10 ಲಕ್ಷ ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ. ಇದರಡಿ ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಕರಾವಳಿಯ ಮಹಾನಗರ ಮಂಗಳೂರು ನಡುವೆ ಆರ್ಥಿಕ ಕಾರಿಡಾರ್ ನಿರ್ಮಿಸುವ ಪ್ರಸ್ತಾವ ಇದೆ. ಜತೆಗೆ ಹೈದರಾಬಾದ್- ಪಣಜಿ ನಡುವೆ ಮತ್ತೊಂದು ಆರ್ಥಿಕ ಕಾರಿಡಾರ್ ನಿರ್ಮಾಣದ ಚಿಂತನೆಯನ್ನು ಹೊಂದಿದೆ. ವಿಶೇಷ ಎಂದರೆ, ಹೈದರಾಬಾದ್- ಪಣಜಿ ಕಾರಿಡಾರ್ ಹೆಚ್ಚಾಗಿ ಕರ್ನಾಟಕದಲ್ಲೇ ಹಾದು ಹೋಗಲಿದೆ.
2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ಅತ್ಯಂತ ಬೃಹತ್ ಯೋಜನೆಗಳಲ್ಲಿ ‘ಭಾರತಮಾಲಾ’ ಒಂದಾಗಿದ್ದು, ದೇಶದ ಎರಡನೇ ಅತಿದೊಡ್ಡ ಹೆದ್ದಾರಿ ಕಾರ್ಯಕ್ರಮವಾಗಿದೆ. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎನ್ಎಚ್ಡಿಪಿ)ಯಡಿ 50 ಸಾವಿರ ಕಿ.ಮೀ. ಹೆದ್ದಾರಿಯನ್ನು ಜಾಗತಿಕ ಗುಣಮಟ್ಟಗಳಿಗೆ ಅನುಗುಣವಾಗಿ ನಿರ್ಮಿಸಿತ್ತು. ಇದೀಗ ಎನ್ಎಚ್ಡಿಪಿ ಕೂಡ ‘ಭಾರತಮಾಲಾ’ದಲ್ಲಿ ವಿಲೀನಗೊಳ್ಳಲಿದ್ದು, ಬಾಕಿ ಇರುವ ಯೋಜನೆಗಳನ್ನೂ ಪೂರ್ಣಗೊಳಿಸಲಾಗುತ್ತದೆ.
‘ಭಾರತ ಮಾಲಾ’ ಯೋಜನೆ ಕುರಿತು ಮಾಸಾರಂಭದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಪ್ರಾತ್ಯಕ್ಷಿಕೆ ವೀಕ್ಷಿಸಿದೆ. 5.35 ಲಕ್ಷ ಕೋಟಿ ರು. ಮೊತ್ತದಲ್ಲಿ 29 ಸಾವಿರ ಕಿ.ಮೀ. ಹೆದ್ದಾರಿ, ಆರ್ಥಿಕ ಕಾರಿಡಾರ್ ಯೋಜನೆಗಳನ್ನು ನಿರ್ಮಾಣ ಮಾಡುವ ‘ಭಾರತ ಮಾಲಾ’ದ ಪ್ರಥಮ ಹಂತಕ್ಕೆ ಅನುಮತಿ ನೀಡುವಂತೆ ಸಾರ್ವಜನಿಕ ಹೂಡಿಕೆ ಮಂಡಳಿಗೆ ಸೂಚನೆ ನೀಡಿದೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಥಿಕ ಕಾರಿಡಾರ್ಗಳ ಸೃಷ್ಟಿ, ಗಡಿ ಹೆದ್ದಾರಿಗಳ ಅಭಿವೃದ್ಧಿ, ಅಂತಾರಾಷ್ಟ್ರೀಯ ಸಂಪರ್ಕ ಕಲ್ಪಿಸುವ ರಸ್ತೆ, ಕರಾವಳಿ ಹಾಗೂ ಬಂದರು ಸಂಪರ್ಕ ಯೋಜನೆಯನ್ನು ‘ಭಾರತ ಮಾಲಾ’ ಹೊಂದಿದ್ದು, ಯೋಜನೆಯ ನೀಲನಕ್ಷೆ ಅಂತಿಮಗೊಂಡಿದೆ. ವಿವರವಾದ ಯೋಜನಾ ವರದಿ ರಚನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.
‘ಭಾರತ ಮಾಲಾ’ ಯೋಜನೆಯಡಿ 44 ಆರ್ಥಿಕ ಕಾರಿಡಾರ್ಗಳನ್ನು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಿಂದ ನೇಮಕಗೊಂಡಿದ್ದ ಎ.ಟಿ. ಕೀರ್ನಿ ಗುರುತಿಸಿದೆ. ಬೆಂಗಳೂರು- ಮಂಗಳೂರು, ಹೈದರಾಬಾದ್- ಪಣಜಿ, ಮುಂಬೈ- ಕೊಚ್ಚಿನ್- ಕನ್ಯಾಕುಮಾರಿ, ಸಂಬಾಲ್ಪುರ- ರಾಂಚಿ ಮಾರ್ಗಗಳು ಅದರಲ್ಲಿ ಸೇರಿವೆ.
ಆರ್ಥಿಕ ಕಾರಿಡಾರ್ ಏಕೆ?
ಸರಕುಗಳು ತ್ವರಿತ ಸಾಗಣೆ ಉದ್ದೇಶದಿಂದ ಕೇಂದ್ರ ಸರ್ಕಾರ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡಲು ಉದ್ದೇಶಿಸಿದೆ. ಒಟ್ಟಾರೆ 21 ಸಾವಿರ ಕಿ.ಮೀ. ಉದ್ದದ ಕಾರಿಡಾರ್ಗಳು ಇವಾಗಿರಲಿದ್ದು, 14 ಸಾವಿರ ಕಿ.ಮೀ. ಉದ್ದದ ಫೀಡರ್ ಮಾರ್ಗಗಳನ್ನೂ ನಿರ್ಮಾಣ ಮಾಡಲಾಗುತ್ತದೆ. ಸರಕುಗಳ ಸಾಗಣೆ ವೆಚ್ಚ ಸದ್ಯ ಶೇ.18ರಷ್ಟಿದ್ದು, ಅದನ್ನು ತಗ್ಗಿಸುವ ಸಲುವಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಾರಿಡಾರ್ಗಳಿಗೆ ಒತ್ತು ನೀಡುತ್ತಿದ್ದಾರೆ.
ಏನಿದು ಭಾರತಮಾಲಾ?
ದೇಶದ ಗಡಿಭಾಗಗಳು, ಬಂದರು ನಗರಗಳು, ಪ್ರವಾಸಿ ಕೇಂದ್ರಗಳು ಹಾಗೂ ವ್ಯಾಪಾರಿ ಕೇಂದ್ರಗಳನ್ನು ಸಂಪರ್ಕಿಸುವ ಹೆದ್ದಾರಿ ಯೋಜನೆ ಇದು. ಸುಮಾರು 25 ಸಾವಿರ ಕಿ.ಮೀ. ರಸ್ತೆಗಳನ್ನು ಇದರಡಿ ಅಭಿವೃದ್ಧಿಪಡಿಸಲಾಗುತ್ತದೆ. ಇದೇ ಯೋಜನೆಯಡಿ ಆರ್ಥಿಕ ಕಾರಿಡಾರ್ ಕೂಡಾ ಬರುತ್ತದೆ
