ನವದೆಹಲಿ (ಸೆ. 25): ತಂತ್ರಜ್ಞಾನ ಅಪಾಯಕಾರಿ ತಿರುವು ಪಡೆದುಕೊಂಡಿದೆ ಎಂದು ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ, ‘ನಾನು ನನ್ನ ಸ್ಮಾರ್ಟ್‌ಫೋನ್ ಬಿಟ್ಟು, ಬೇಸಿಕ್ ಫೋನ್ ಬಳಸುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದು ನ್ಯಾಯಮೂರ್ತಿಯೊಬ್ಬರು ಕೋರ್ಟಿನಲ್ಲಿ ಹೇಳಿರುವ ಘಟನೆ ಮಂಗಳವಾರ ನಡೆದಿದೆ.

ದೇಶದಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಪ್ಪಿಸುವ ಸಲುವಾಗಿ ಮಾರ್ಗಸೂಚಿ ರೂಪಿಸಲು ಕಾಲಮಿತಿ ಎಷ್ಟು ಬೇಕಾಗುತ್ತದೆ ಎಂಬುದನ್ನು ೩ ವಾರಗಳಲ್ಲಿ ತಿಳಿಸುವಂತೆ ಕೋರ್ಟ್ ಹೇಳಿದೆ. ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಗಿದೆ.

ಈ ವೈಜ್ಞಾನಿಕ ವಿಷಯವನ್ನು ನಿರ್ಧರಿಸಲು ಸುಪ್ರೀಂಕೋರ್ಟ್ ಅಥವಾ ಹೈಕೋ ರ್ಟ್ ಆಗಲಿ ಸಮರ್ಥ ಅಲ್ಲ ಎಂದೂ ತಿಳಿಸಿದೆ. ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ| ದೀಪಕ್ ಗುಪ್ತಾ, ಆಳಕ್ಕೆ ಇಳಿದಂತೆಲ್ಲಾ ತಂತ್ರಜ್ಞಾನ ಅಪಾಯಕಾರಿ ಹಾದಿಯಲ್ಲಿ ಬೆಳವಣಿಗೆ ಹೊಂದುತ್ತಿರುವುದು ತಿಳಿಯುತ್ತದೆ. ಹೀಗಾಗಿ ನನ್ನ ಸ್ಮಾರ್ಟ್ ಫೋನ್ ಬಿಟ್ಟು ಬೇಸಿಕ್ ಫೋನ್‌ಗೆ ಮರಳುವ ಯೋಚನೆಯಲ್ಲಿದ್ದೇನೆ.

ಅರ್ಧತಾಸಿನಲ್ಲಿ ಎಕೆ-47 ಖರೀದಿಸಬಹುದು ಎಂಬುದು ನನಗೆ ಮನ ದಟ್ಟಾಯಿತು ಎಂದು ತಿಳಿಸಿದರು. ಸಾಮಾಜಿಕ ಜಾಲತಾಣ ಆಧಾರ್ ಜತೆ ಜೋಡಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಈ ಮಾತುಗಳನ್ನು ಆಡಿದರು.