ನವದೆಹಲಿ(ಮಾ.06): ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ರಕ್ಷಣಾ ಸಚಿವಾಲಯದಿಂದಲೇ ಕಳುವಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ರಫೆಲ್ ಒಪ್ಪಂದದ ಸುಪ್ರೀಂ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಿತು.

ರಫೆಲ್ ಒಪ್ಪಂದದ ಮಹತ್ವದ ದಾಖಲೆಗಳು ಕಳುವಾಗಿದ್ದು, ಈ ಕುರಿತು ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

ಈ ದಾಖಲೆಗಳನ್ನು ಇಲಾಖೆಯ ಮಾಜಿ ಅಥವಾ ಹಾಲಿ ಅಧಿಕಾರಿಗಳೇ ಈ ದಾಖಲೆಗಳನ್ನು ಕದ್ದಿರಬಹುದು ಎಂಬ ಅನುಮಾನವಿದ್ದು, ನಾವೀಗಾಗಲೇ ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಕೆ.ಕೆ ವೇಣುಗೋಪಾಲ್ ಹೇಳಿದರು.

ಇನ್ನು ಅರ್ಜಿದಾರ ವಕೀಲ ಪ್ರಶಾಂತ್ ಭೂಷಣ  ಅವರ ಕೈಯಲ್ಲಿರುವ ರಫೆಲ್ ದಾಖಲೆಗಳು ಕೇಂದ್ರ ರಕ್ಷಣಾ ಇಲಾಖೆಯಿಂದ ಕಳ್ಳತನ ಮಾಡಿದವು ಎಂದು ಸರ್ಕಾರಿ ವಕೀಲರು ಆರೋಪಿಸಿದ್ದಾರೆ.

ಇವು ರಹಸ್ಯ ದಾಖಲೆಗಳಾಗಿದ್ದು ಇದರಲ್ಲಿನ ಅಂಶಗಳನ್ನು ದೇಶದ ರಕ್ಷಣಾ ಹಿತದೃಷ್ಟಿಯಿಂದ ಬಹಿರಂಗಪಡಿಸುವಂತಿಲ್ಲ. ಪ್ರತಿವಾದಿಗಳ ಕೈಸೇರಿರುವ ದಾಖಲೆಗಳು ಅಧಿಕೃತ ರಹಸ್ಯ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದರು.