ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗೆ ನಿಷೇಧ ಹೇರುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಚಿಂತಿಸಿದೆ ಎನ್ನಲಾಗಿದೆ. ಪಿಎಫ್ಐ ಮತ್ತು ಅದರ ರಾಜಕೀಯ ಘಟಕ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಕಾರ್ಯಕರ್ತರ ವಿರುದ್ಧ ನಾಲ್ಕು ಭಯೋತ್ಪಾದನಾ ಪ್ರಕರಣಗಳ್ಲಿ ದೋಷಾರೋಪ ದಾಖಲಾಗಿರುವ ಅಥವಾ ದೋಷಿಗಳಾಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಎ) ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯದೊಂದಿಗೆ ಹಂಚಿಕೊಂಡಿದೆ.
ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗೆ ನಿಷೇಧ ಹೇರುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಚಿಂತಿಸಿದೆ ಎನ್ನಲಾಗಿದೆ.
ಪಿಎಫ್ಐ ಮತ್ತು ಅದರ ರಾಜಕೀಯ ಘಟಕ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಕಾರ್ಯಕರ್ತರ ವಿರುದ್ಧ ನಾಲ್ಕು ಭಯೋತ್ಪಾದನಾ ಪ್ರಕರಣಗಳ್ಲಿ ದೋಷಾರೋಪ ದಾಖಲಾಗಿರುವ ಅಥವಾ ದೋಷಿಗಳಾಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಎ) ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯದೊಂದಿಗೆ ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನಾ ಆಪಾದನೆಯಲ್ಲಿ ಪಿಎಫ್ಐಗೆ ನಿಷೇಧ ಹೇರಲು ಗೃಹ ಸಚಿವಾಲಯ ನಡೆಸಿದ್ದ ಯತ್ನಕ್ಕೆ ಹೆಚ್ಚಿನ ಬಲ ಸಿಕ್ಕಂತಾಗಿದೆ.
ಬೆಂಗಳೂರಿನಲ್ಲಿ ನಡೆದಿದ್ದ ಆರೆಸ್ಸೆಸ್ ನಾಯಕ ರುದ್ರೇಶ್ ಹತ್ಯೆ ಪ್ರಕರಣ, ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪ್ರೊಫೆಸರ್ ಒಬ್ಬರ ಕೈಕಡಿದ ಪ್ರಕರಣ, ಕಣ್ಣೂರಿನಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದ ಸ್ಥಳದಲ್ಲಿ ಖಡ್ಗಗಳು, ನಾಡಬಾಂಬ್’ಗಳು ಮತ್ತು ಐಇಡಿಗಳನ್ನು ಮಾಡಲು ಬೇಕಾದ ಸಲಕರಣೆಗಳನ್ನು ಎನ್’ಐಎ ವಶಪಡಿಸಿಕೊಂಡಿರುವ ಪ್ರಕರಣ ಮತ್ತು ದಕ್ಷಿಣ ಭಾರತದಲ್ಲಿ ಸಂಯೋಜಿಸಲಾದ ದಾಳಿಗಳ ಇಸ್ಲಾಮಿಕ್ ಸ್ಟೇಟ್ ಅಲ್-ಹಿಂದಿ ಮಾದರಿ ಪ್ರಕರಣ ಮುಂತಾದ ನಾಲ್ಕು ಪ್ರಕರಣಗಳ ಬಗ್ಗೆ ಎನ್’ಐಎ ಮಾಹಿತಿ ಹಂಚಿಕೊಂಡಿದೆ ಎನ್ನಲಾಗಿದೆ.
