ಬೆಂಗಳೂರು[ಆ.19]: ಪೋನ್ ಕದ್ದಾಲಿಕೆ ಪ್ರಕರಣದ ತನಿಖೆ ಬಗ್ಗೆ ಇತ್ತೀಚಿನವರೆಗೆ ಹೆಚ್ಚು ಆಸಕ್ತಿ ತೋರಿಸದೇ ಇದ್ದ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸೇರಿ ಹಲವರನ್ನು ಭೇಟಿ ಮಾಡಿ ಬೆಂಗಳೂರಿಗೆ ಬರುತ್ತಿದ್ದಂತೆ ಇಂತಹದೊಂದು ತೀರ್ಮಾನ ತೆಗೆದುಕೊಳ್ಳಲು ಹೈಕಮಾಂಡ್ ನೀಡಿದ ಸೂಚನೆ ಕಾರಣವೆಂದು ಹೇಳಲಾಗುತ್ತಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ಬಗ್ಗೆ ಮುಖ್ಯಕಾರ್ಯ ದರ್ಶಿಗಳಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ, ವರದಿ ಬಂದ ನಂತರ ತನಿಖೆ ಬಗ್ಗೆ ನಿರ್ಧರಿಸುವುದಾಗಿ ಯಡಿಯೂರಪ್ಪ ಹೇಳುತ್ತಿದ್ದರು. ಪ್ರಕರಣ ವನ್ನು ಸಿಬಿಐಗೆ ವಹಿಸಿದರೆ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂಬ ಅಪವಾದ ಎದುರಿಸಬೇಕಾಗುತ್ತದೆ ಎಂಬ ಸಣ್ಣ ಅಳಕು ಅವರಲ್ಲಿತ್ತು. ಈ ಮಧ್ಯೆ, ರಾಜ್ಯ ಸಚಿವ ಸಂಪುಟ ರಚನೆ ಮಾಡುವ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಯಡಿಯೂರಪ್ಪ ದೆಹಲಿಯಲ್ಲಿ 3 ದಿನ ಇದ್ದರು.

ಫೋನ್ ಟ್ಯಾಪಿಂಗ್ ಸಿಬಿಐ ತನಿಖೆ ಸ್ವಾಗತಾರ್ಹ : ಜೆಡಿಎಸ್ ಮುಖಂಡ

ಶನಿವಾರ ಸಂಜೆ ಅಮಿತ್ ಶಾ ಭೇಟಿ ವೇಳೆ ಹಿಂದಿನ ಮೈತ್ರಿ ಸರ್ಕಾರ ಮಾಡಿದ್ದ ಫೋನ್ ಕದ್ದಾಲಿಕೆ ಪ್ರಕರಣ ಚರ್ಚೆಗೆ ಬಂದಿದೆ. ಈ ವೇಳೆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ ಐಟಿ) ವಹಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿ ಕ್ರಿಯಿಸಿರುವ ಶಾ, ರಾಜ್ಯದ ತನಿಖಾ ಸಂಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಯಾವ ತನಿಖಾ ಸಂಸ್ಥೆಗೆ ತನಿಖೆ ನಡೆಸ ಬೇಕು ಎಂಬುದರ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದರು ಎನ್ನಲಾಗಿದೆ.

ಬಿಜೆಪಿ ರಾಷ್ಟ್ರೀಯ ಕಾರ್ಯಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಬೆಳಗ್ಗೆ ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸೂಚಿಸಿದರು. ಅದರಂತೆ ಫೋನ್ ಕದ್ದಾಲಿಕೆ ಪ್ರಕರಣವನ್ನು ಯಡಿಯೂರಪ್ಪ ಅವರು ಸಿಬಿಐಗೆ ವಹಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.