Asianet Suvarna News Asianet Suvarna News

ದಲಿತರ ಮನೆಗೆ ತೆರಳಿ ಉಪಹಾರ ಸೇವಿಸಿದ ಪಿಯೂಶ್ ಗೋಯಲ್

ದೇಶದಲ್ಲಿ ದಲಿತರ ಕಾಲೋನಿಗಳಿಗೆ ಭೇಟಿ ನೀಡುವ ಬಿಜೆಪಿ ನಾಯಕರ ಕಾರ್ಯಕ್ರಮವು ಮುಂದುವರಿದಿದ್ದು, ರಾಜ್ಯ ಬಿಜೆಪಿ ಮುಖಂಡರ ತರುವಾಯ ಇದೀಗ ರಾಷ್ಟ್ರ ನಾಯಕರ ಸರದಿ.

Central Minister Visits Dalits House and Have Food
  • Facebook
  • Twitter
  • Whatsapp
ಬೆಂಗಳೂರು (ಜೂ.06): ದೇಶದಲ್ಲಿ ದಲಿತರ ಕಾಲೋನಿಗಳಿಗೆ ಭೇಟಿ ನೀಡುವ ಬಿಜೆಪಿ ನಾಯಕರ ಕಾರ್ಯಕ್ರಮವು ಮುಂದುವರಿದಿದ್ದು, ರಾಜ್ಯ ಬಿಜೆಪಿ ಮುಖಂಡರ ತರುವಾಯ ಇದೀಗ ರಾಷ್ಟ್ರ ನಾಯಕರ ಸರದಿ.
 
ಕೇಂದ್ರದ ಇಂಧನ ಸಚಿವ ಪಿಯೂಷ್ ಗೋಯಲ್ ಮಂಗಳವಾರ ನಗರದ ಬೊಮ್ಮನಹಳ್ಳಿ ಪ್ರದೇಶ ವ್ಯಾಪ್ತಿಯ ಹೊಂಗಸಂದ್ರದಲ್ಲಿನ ದಲಿತರ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ದಲಿತರ ಮನೆಗಳಲ್ಲಿ ಉಪಹಾರ ಸೇವಿಸಿದರು.
ದಲಿತರ ಕಾಲೋನಿಗೆ ಭೇಟಿ ನೀಡಿದ ಸಚಿವ ಗೋಯಲ್ ಅವರನ್ನು ಸ್ಥಳೀಯರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಮೊದಲಿಗೆ ಆರ್‌ಎಸ್‌ಎಸ್ ಕಾರ್ಯಕರ್ತ ದಿವಂಗತ ಮದನ್‌ಗಿರಿಯಪ್ಪ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದರು. ಮದನ್‌ಗಿರಿಯಪ್ಪ ಪತ್ನಿ ಮಲ್ಲಿಕಾ (ಯಲ್ಲಮ್ಮ) ಅವರು ಸಚಿವರನ್ನು ಸ್ವಾಗತಿಸಿ ಉಪಹಾರ ನೀಡಿದರು. ಚಪಾತಿ, ಆಲೂಗಡ್ಡೆ ಮತ್ತು ಬೀನ್ಸ್ ಪಲ್ಯ, ಚಿತ್ರಾನ್ನ, ಚೆಟ್ನಿ ಉಪಹಾರ ಸೇವಿಸಿದ ಸಚಿವರು, ಮಲ್ಲಿಕಾ ಕುಟುಂಬದವರ ಕುಶಲೋಪರಿ ವಿಚಾರಿಸಿದರು. ಮದನಗಿರಿಯಪ್ಪ ಅವರ ಪತ್ನಿ ಮಲ್ಲಿಕಾ (ಯಲ್ಲಮ್ಮ) ಅವರಿಗೆ ಸಚಿವರು ಒಂದು ಲಕ್ಷ ರೂ. ಸಹಾಯ ಮೊತ್ತ ನೀಡಿದರು. ಬಳಿಕ ಕೂಲಿ ಕಾರ್ಮಿಕ ರಾಯಪ್ಪ ಮನೆಗೆ ತೆರಳಿ ಲಘು ಉಪಹಾರ ಮತ್ತು ಚಹಾ ಸೇವಿಸಿದರು. ರಾಯಪ್ಪ ಕುಟುಂಬದೊಂದಿಗೆ ಕೆಲ ಹೊತ್ತು ಕಳೆದರು. ಸಚಿವರಿಗೆ ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಸಾಥ್ ನೀಡಿದರು.
 
ಕೇಂದ್ರ ಸಚಿವರೊಬ್ಬರು ಅನೋನ್ಯವಾಗಿ ಕಳೆದಿದ್ದು ದಲಿತರ ಕುಟುಂಬಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಇದೇ ವೇಳೆ ದಲಿತರ ಕಾಲೋನಿಗೆ ಭೇಟಿ ನೀಡಿದ ಸವಿ ನೆನಪಿಗಾಗಿ ಸಸಿ ನೆಟ್ಟರು. ಶಾಸಕ ಸತೀಶ್ ರೆಡ್ಡಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾನ್ವಿತ ಪುರಸ್ಕಾರ ನೀಡಿ ಗೌರವಿಸಲಾಯಿತು. ಬೊಮ್ಮನಹಳ್ಳಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಸೋಮು ಮನೆಯಲ್ಲಿ ಟೀ ಬಿಸ್ಕೆತ್ ಸೇವಿಸಿದರು. ಅವರ ಕುಟುಂಬ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಂಡರು. ಅಂತಿಮವಾಗಿ ಅಲ್ಲಿನ ರೇಣುಕಾ ಯಲ್ಲಮ್ಮ ದೇವಸ್ಥಾನ ಮತ್ತು ಆಂಜನೇಯಸ್ವಾಮಿ ದೇವರ ದರ್ಶನ ಪಡೆದರು. 
 
ದಲಿತರ ಕಾಲೋನಿ ಭೇಟಿ ವೇಳೆ ಮಾತನಾಡಿದ ಸಚಿವ ಪಿಯೂಷ್ ಗೋಯಲ್, ಕೇಂದ್ರ ಸರ್ಕಾರವು ದಲಿತರ ಏಳ್ಗೆಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಬ್ಬರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಪಾಸ್‌ಬುಕ್‌ಗಳನ್ನು ಹೊಂದಿರಬೇಕು ಎಂದು ಹೇಳಿದರು.  ನನ್ನ ಜೀವನದಲ್ಲಿಯೇ ಅತ್ಯಂತ ರುಚಿಯಾದ ಉಪಹಾರ ಸೇವಿಸಿದ್ದೇನೆ. ನಾನು ಈ ಕಾಲೋನಿಗೆ ಬಾರದಿದ್ದರೆ ಸ್ಮರಣೀಯ ಅನುಭವ ಕಳೆದುಕೊಳ್ಳುತ್ತಿದ್ದೆ. ನನ್ನ ಬದುಕಿನಲ್ಲಿ ನಿಜಕ್ಕೂ ಇದು ಅತ್ಯಂತ ಸುವರ್ಣ ಗಳಿಗೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸೂಚನೆಯಂತೆ ದಲಿತರ ಕುಟುಂಬಗಳಿಗೆ ಭೇಟಿ ನೀಡಲಾಗುತ್ತಿದೆ. ನನ್ನ ಸಹೋದರ, ಸಹೋದರಿಯರ  ಮನೆಗೆ ಬಂದಷ್ಟು ಸಂತೋಷವಾಗಿದೆ. ಇಲ್ಲಿನ ಜನರ ಆದರಾತಿಥ್ಯ ಮರೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
 
ರಾಜಕೀಯ ಭೇಟಿಯಲ್ಲ- ಗೋಯಲ್ 
 
ದಲಿತರ ಕಾಲೋನಿ ಭೇಟಿಗೂ ಮುಂದಿನ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಭೇಟಿಯಲ್ಲಿ ದುರುದ್ದೇಶ ಹಾಗೂ ಇದರ ಹಿಂದೆ ಯಾವುದೇ ರಾಜಕೀಯ ಲಾಭ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರವು ದೇಶದ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿದೆ. ಇದಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಪರಿಸರ ರಕ್ಷಣೆಗೂ ಆದ್ಯತೆ ನೀಡಲಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲಿಯೂ ವಿಶ್ವಮಟ್ಟದಲ್ಲಿ ಭಾರತವು ನಾಯಕನಾಗಿ ಬೆಳೆಯುತ್ತಿದೆ. ಸ್ವಾಮಿ ವಿವೇಕಾನಂದ ಅವರ ಸಂದೇಶಗಳು ಈಗಿನ ಯುವಜನಾಂಗಕ್ಕೆ ಮಾದರಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಯುವಜನಾಂಗವೇ ರಾಷ್ಟ್ರದ ಮುಂದಿನ ಭವಿಷ್ಯ ಎಂಬ ನಿಟ್ಟಿಯಲ್ಲಿ ಕೆಲಸ ಮಾಡಲಾಗುತ್ತಿದ್ದಾರೆ. ಯುವಜನಾಂಗ ಒಗ್ಗಟ್ಟಾಗಿ ಕೆಲಸ ಮಾಡಿದರೆ ದೇಶದ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಬೊಮ್ಮನಹಳ್ಳಿ ವೃತ್ತದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸ್ವಾಮಿ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಪೊರಕೆ ಹಿಡಿದು ಕಸ ಗೂಡಿಸಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು. ಬಳಿಕ ಇ-ಶೌಚಾಲಯವನ್ನು ಉದ್ಘಾಟಿಸಿದರು.
 
ಮೀಸಲಾತಿ ಮುಂದುವರಿಕೆ ಬಗ್ಗ ಸಂಶಯ ಬೇಡ
ರಾಷ್ಟ್ರದಲ್ಲಿ ನೂರಕ್ಕೆ ನೂರರಷ್ಟು ಮೀಸಲಾತಿಯನ್ನು ಮುಂದುವರಿಸಲಾಗುವುದು. ದಲಿತರು ಈ ಬಗ್ಗೆ ಯಾವುದೇ ಅನುಮಾನ, ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ ನೀಡಿದರು.
ದಲಿತರ ಕಾಲೋನಿಗೆ ಭೇಟಿ ನೀಡಿದ ವೇಳೆ ಬಹುಜನ ದಲಿತ ಸಂಘ ಸಮಿತಿ ಅಧ್ಯಕ್ಷ ಆರ್.ಎಂ.ಎಂ.ರಮೇಶ್ ಅವರ ಮನವಿ ಪತ್ರ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಚಿವರು, ಆರ್ಥಿಕವಾಗಿ, ಸಾಮಾಜಿಕವಾಗಿ ದಲಿತರು ಸ್ವಾವಲಂಬಿ ಹಾಗೂ ಅಭಿವೃದ್ಧಿಯಾಗುವವರೆಗೆ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ. ಕೇಂದ್ರ ಸರ್ಕಾರವು ಮೀಸಲಾತಿ ಮುಂದುವರಿಸಲು ಬದ್ಧವಿದೆ ಎಂದು ಹೇಳಿದರು. 
 
ಸಿಂಗಾರಗೊಂಡಿದ್ದ ಕಾಲೋನಿ 
ಬೊಮ್ಮನಹಳ್ಳಿ ಪ್ರದೇಶದ ಹೊಂಗಸಂದ್ರದಲ್ಲಿನ ದಲಿತರ ಕಾಲೋನಿಯು ಎಂದಿನಂತೆ ಇರಲಿಲ್ಲ. ಕೇಂದ್ರ ಸಚಿವರ ಭೇಟಿ ಹಿನ್ನೆಲೆಯಲ್ಲಿ ನವವಧುವಿನ ಕಳೆಗಟ್ಟಿತ್ತು. ಇಡೀ ಕಾಲೋನಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸುಮಾರು ೨೫-೩೦ ಮನೆಗಳಿರುವ ಕಾಲೋನಿಯಲ್ಲಿ ಗೂಡಿಸಿ-ಸಾರಿಸಿ ಮನೆಯಂಗಳದಲ್ಲಿ ರಂಗೋಲಿ ಹಾಕಲಾಗಿತ್ತು. ನಾಯಕರ ಕಟೌಟ್‌ಗಳು ರಾರಾಜಿಸುತ್ತಿದ್ದವು. ಅಲ್ಲದೇ, ಕಸದ ರಾಶಿ ಇದ್ದಿದ್ದನ್ನು ಸ್ವಚ್ಛಗೊಳಿಸಿ ವಾಸನೆ ಬಾರದಂತೆ ಬ್ಲೀಚಿಂಗ್ ಪೌಂಡರ್ ಹಾಕಲಾಗಿತ್ತು. 

 

 

Follow Us:
Download App:
  • android
  • ios