ಗಂಗಾವತಿ, ಚಿತ್ರದುರ್ಗದ ಕೋಟೆ ಪ್ರದೇಶ ಮತ್ತು ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ನಡೆದಿದ್ದ ಅಹಿತಕರ ಘಟನೆಗಳು ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಕಾರಣವಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಇಂಥ ಘಟನೆಗಳು  ಮರುಕಳಿಸದಂತೆ ಎಚ್ಚರ ವಹಿಸುವ ಜತೆಗೆ ಕೋಮು ಸಾಮರಸ್ಯವನ್ನು ಕಾಪಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಡಿಸೆಂಬರ್ ೧೯ರಂದು ರಾಜ್ಯಕ್ಕೆ ಕೇಂದ್ರ ಬರೆದಿರುವ ಪತ್ರ ಸುವರ್ಣನ್ಯೂಸ್-ಕನ್ನಡಪ್ರಭಕ್ಕೆ ಲಭ್ಯವಾಗಿದೆ.

ಬೆಂಗಳೂರು(ಡಿ.22): ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಗೃಹ ಮಂತ್ರಾಲಯ, ರಾಜ್ಯ ಸರ್ಕಾರಕ್ಕೆ ರಹಸ್ಯ ಪತ್ರ ಬರೆದಿದೆ. ಈ ರಹಸ್ಯ ಪತ್ರ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭಕ್ಕೆ ಲಭ್ಯವಾಗಿದೆ.

 ಕೇಂದ್ರದಿಂದ ರಾಜ್ಯಕ್ಕೆ ರಹಸ್ಯ ಪತ್ರ ರವಾನೆ

ಗಂಗಾವತಿ, ಚಿತ್ರದುರ್ಗದ ಕೋಟೆ ಪ್ರದೇಶ ಮತ್ತು ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ನಡೆದಿದ್ದ ಅಹಿತಕರ ಘಟನೆಗಳು ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಕಾರಣವಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವ ಜತೆಗೆ ಕೋಮು ಸಾಮರಸ್ಯವನ್ನು ಕಾಪಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಡಿಸೆಂಬರ್ ೧೯ರಂದು ರಾಜ್ಯಕ್ಕೆ ಕೇಂದ್ರ ಬರೆದಿರುವ ಪತ್ರ ಸುವರ್ಣನ್ಯೂಸ್-ಕನ್ನಡಪ್ರಭಕ್ಕೆ ಲಭ್ಯವಾಗಿದೆ.

ಡಿಸೆಂಬರ್ 11 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹನುಮ ಜಯಂತಿ ಮತ್ತು ಮಹಮದ್ ಪೈಗಂಬರ್ ಜಯಂತಿ ಸಂದರ್ಭದಲ್ಲಿ ಬಂಟಿಂಗ್ಸ್ ಕಟ್ಟುವ ವಿಚಾರದಲ್ಲಿ ಡಿಸೆಂಬರ್ ಕೋಮು ಘರ್ಷಣೆ ನಡೆದಿತ್ತು. ಹನುಮ ಜಯಂತಿ ಅಂಗವಾಗಿ ಗಂಗಾವತಿಯ ಕೋಟೆ ಪ್ರದೇಶದಲ್ಲಿ ಹಾಕಲಾಗಿದ್ದ ವೀರಾಂಜನೆಯ ಫ್ಲೆಕ್ಸ್‌ನ್ನು ಕಿಡಿಗೇಡಿಗಳು ಹರಿದದ್ದರಿಂದ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಇನ್ನೂ ಕೋಮು ಘರ್ಷಣೆ ವೇಳೆ ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್ ಅವರ ಕಾರಿನ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು. ಇದೇ ಪ್ರಕರಣ ಸಂಬಂಧ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಗಂಗಾವತಿಯ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಕಾಳಿಕೃಷ್ಣ ಅವರನ್ನು ಬಳ್ಳಾರಿ ವಲಯದ ಐಜಿಪಿ ಎಸ್.ಮುರುಗನ್ ಅವರು ಅಮಾನತುಗೊಳಿಸಿ ಇಲಾಖೆ ವಿಚಾರಣೆಗೆ ಆದೇಶಿಸಿದ್ದಾರೆ.

ರಾಜ್ಯದಲ್ಲಿ ನಡೆದ ಕೋಮು ಗಲಭೆಗಳು

ಬಳ್ಳಾರಿಯ ಹೊಸಪೇಟೆಯ ಚಿತ್ತವಾಡ್ಗಿಯಲ್ಲಿ ಗಲಭೆ ನಡೆದಿತ್ತು. ಧ್ವಜ ಮತ್ತು ಬ್ಯಾನರ್ ಕಟ್ಟುವ ವಿಷಯದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ಮತ್ತು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ದಾವಣಗೆರೆಯ ಹೊನ್ನಾಳಿಯ ಕುಂದೂರು ಗ್ರಾಮದ ಜಮಾತೆ ಇಸ್ಲಾಮಿಗೆ ಸೇರಿದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಪರಸ್ಪರ ಗುಂಪುಗಳಲ್ಲಿದ್ದ ದುಷ್ಕರ್ಮಿಗಳು ಧ್ವಜವನ್ನು ಸುಟ್ಟು ಹಾಕಿದ್ದರು. ಚಿತ್ರದುರ್ಗದ ನೆಹರೂ ನಗರದಲ್ಲಿ ದುಷ್ಕರ್ಮಿಗಳು ಒಂದು ಕೋಮಿಗೆ ಸೇರಿದ ಧ್ವಜವನ್ನು ಹರಿದು ಹಾಕಿದ್ದರು. ಆದ್ರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ.

ರಾಜ್ಯದಲ್ಲಿ ನಡೆದಿರೋ ಈ ಎಲ್ಲಾ ಕೋಮುಗಲಭೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಮಂತ್ರಾಲಯ, ಈ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಮತ್ತು ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಅವರಿಗೆ ಸೂಚಿಸಿದೆ. ಅಲ್ಲದೇ ಕೋಮು ಸಂಘರ್ಷದಲ್ಲಿ ಪಾಲ್ಗೊಂಡವವರ ವಿರುದ್ಧ ಕೈಗೊಂಡ ಕ್ರಮದ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ.