ನವದೆಹಲಿ[ಅ.17]: ಸಂಸದರಿಗೆ ದೆಹಲಿಯಲ್ಲಿ ನೀಡಲಾಗುವ ಬಂಗಲೆಗಳನ್ನು ಸದಸ್ಯತ್ವ ಕಳೆದುಕೊಂಡ ನಂತರವೂ ಖಾಲಿ ಮಾಡದ ಸಂಸದರಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ಖುದ್ದು ಸರ್ಕಾರವೇ ಮಾಜಿ ಸಂಸದರನ್ನು ಬಂಗಲೆ ಖಾಲಿ ಮಾಡಿಸಲು ಮುಂದಾಗಿದ್ದು, ಸರ್ಕಾರದ ಒಂದು ನಡೆಯಿಂದ ಬೆಚ್ಚಿ ಬಿದ್ದ ಮಾಜಿ ಸಂಸದರು ಬಂಗಲೆಯನ್ನು ಖಾಲಿ ಮಾಡಿದ್ದಾರೆ.

ಅಧಿಕೃತ ಬಂಗಲೆ ಖಾಲಿ ಮಾಡದ 50 ಮಾಜಿ ಸಂಸದರು!, ನೋಟೀಸ್‌ ಕೊಟ್ರೂ ಡೋಂಟ್‌ ಕೇರ್!

ನಿಯಮಾವಳಿಯ ಪ್ರಕಾರ ಸಂಸತ್‌ ಸದಸ್ಯತ್ವ ಕಳೆದುಕೊಂಡ ಬಳಿಕ ಒಂದು ತಿಂಗಳಲ್ಲಿ ಅಧಿಕೃತ ಬಂಗಲೆಯನ್ನು ಖಾಲಿ ಮಾಡಬೇಕು. ಈ ಸಂಬಂಧ ಹಲವಾರು ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. 27 ಮಾಜಿ ಸಂಸದರು ಬಂಗಲೆ ಖಾಲಿ ಮಾಡದೆ ಮೀನ-ಮೇಷ ಎಣಿಸುತ್ತಿದ್ದರು. ಇಂತಹ ವರ್ತನೆ ತೋರಿದ ಮಾಜಿ ಎಂಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಲೋಕಸಭೆಯ ವಸತಿ ಸಮಿತಿ, ದೆಹಲಿ ಪೊಲೀಸರ ಸಹಾಯದೊಂದಿಗೆ ಅವರನ್ನು ಸರ್ಕಾರಿ ಬಂಗಲೆಯಿಂದ ಹೊರ ದಬ್ಬಿದ್ದಾರೆ. ಇದಕ್ಕೂ ಮುನ್ನ ಸರ್ಕಾರಿ ಬಂಗಲೆಯ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನೂ ಸಮಿತಿ ಕಡಿತಗೊಳಿಸಿತ್ತು ಎಂಬುವುದು ಉಲ್ಲೇಖನೀಯ.

ಏನಿದು ವಿವಾದ?

ಲೋಕಸಭಾ ಸದಸ್ಯತ್ವ ಕಳೆದುಕೊಂಡ 200 ಮಂದಿಗೆ ಆಗಸ್ಟ್‌ 19ರಂದೇ ಸಿ.ಆರ್‌.ಪಾಟೀಲ್‌ ನೇತೃತ್ವದ ಲೋಕಸಭಾ ವಸತಿ ಸಮಿತಿ ನಿಯಮಾವಳಿಯ ಪ್ರಕಾರ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್‌ ನೀಡಿತ್ತು. ಮೂರು ದಿನಗಳಲ್ಲಿ ಖಾಲಿ ಮಾಡದೇ ಇದ್ದಲ್ಲಿ ಬಂಗಲೆಯ ವಿದ್ಯುತ್‌, ನೀರು ಮತ್ತು ಅಡುಗೆ ಅನಿಲ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದಾಗಿ ಕೇಂದ್ರ ಎಚ್ಚರಿಸಿತ್ತು. ಈ ಎಚ್ಚರಿಕೆ ಬಳಿಕ ಅನೇಕರು ಬಂಗಲೆ ಖಾಲಿ ಮಾಡಿದ್ದರು. ಆದರೆ ಸುಮಾರು 27 ಮಂದಿ ಮಾಜಿ ಸಂಸದರು ಮಾತ್ರ ಈ ಎಚ್ಚರಿಕೆಗೆ ಬಗ್ಗದೇ, ಬಂಗಲೆ ಖಾಲಿ ಮಾಡಿರಲಿಲ್ಲ.