ಗ್ರಾಹಕರಿಗೆ ಹೊಟೇಲ್'ನ ಸರ್ವಿಸ್ ಇಷ್ಟವಾದಲ್ಲಿ ಮಾತ್ರ ಸರ್ವಿಸ್ ಚಾರ್ಜ್ ಪಾವತಿಸಬಹುದು. ಇಲ್ಲವಾದರೆ, ತಾನು ಆ ಶುಲ್ಕ ಪಾವತಿಸುವುದಿಲ್ಲ ಎಂದು ಕಡ್ಡಿಮುರಿದಂತೆ ಗ್ರಾಹಕ ಹೇಳಲು ಕಾನೂನಿನ ಬಲವಿರಲಿದೆ.
ನವದೆಹಲಿ(ಜ. 02): ಹೊಟೇಲ್ ಗ್ರಾಹಕರಿಗೆ ಕೇಂದ್ರ ಸರಕಾರದಿಂದ ಸ್ವಲ್ಪ ಸಿಹಿ ಸುದ್ದಿ. ಹೊಟೇಲ್'ನವರು ವಿಧಿಸುವ ಸರ್ವಿಸ್ ಚಾರ್ಜ್'ನ್ನು ಪಾವತಿಸುವುದು ಗ್ರಾಹಕರಿಗೆ ಐಚ್ಛಿಕ ಮಾತ್ರ. ಗ್ರಾಹಕರು ಇಚ್ಛಿಸಿದಲ್ಲಿ ಮಾತ್ರ ಹೊಟೇಲ್'ನವರು ಸರ್ವಿಸ್ ಚಾರ್ಜ್ ವಿಧಿಸಬಹುದು ಎಂದು ಕೇಂದ್ರ ಸರಕಾರ ಹೊಸ ನಿಯಮ ಮಾಡಿದೆ. ಹೊಟೇಲ್'ಗಳಲ್ಲಿ ಸುಖಾಸುಮ್ಮನೆ ಬೇಕಾಬಿಟ್ಟಿ ಸರ್ವಿಸ್ ಚಾರ್ಜ್'ಗಳನ್ನು ವಿಧಿಸಲಾಗುತ್ತಿದೆ ಎಂಬ ದೂರುಗಳು ಹೆಚ್ಚು ಸಂಖ್ಯೆಯಲ್ಲಿ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಸರಕಾರ ಈ ನಿಯಮ ಹೊರಡಿಸಿದೆ.
ಹೊಟೇಲ್'ಗಳಲ್ಲಿ ಸಾಮಾನ್ಯವಾಗಿ ಶೇ.5ರಿಂದ 20ರಷ್ಟು ಸರ್ವಿಸ್ ಚಾರ್ಜ್ ಹೇರಲಾಗುತ್ತದೆ. 1986ರ ಗ್ರಾಹಕ ಹಿತರಕ್ಷಣಾ ಕಾಯ್ದೆ ಪ್ರಕಾರ ಗ್ರಾಹಕರ ಮೇಲೆ ಇಂತಹ ಶುಲ್ಕಗಳನ್ನು ಕಡ್ಡಾಯಗೊಳಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಭಾರತೀಯ ಹೊಟೇಲ್ ಸಂಘದೊಂದಿಗೆ ಚರ್ಚೆ ನಡೆಸಿ ವಿವರಣೆ ಕೇಳಿದೆ. ಸರ್ವಿಸ್ ಚಾರ್ಜ್ ಕಡ್ಡಾಯವಲ್ಲ, ಅದು ಹೊಟೇಲ್'ನ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿತೆನ್ನಲಾಗಿದೆ. ಹೀಗಾಗಿ, ಗ್ರಾಹಕರಿಗೆ ಹೊಟೇಲ್'ನ ಸರ್ವಿಸ್ ಇಷ್ಟವಾದಲ್ಲಿ ಮಾತ್ರ ಸರ್ವಿಸ್ ಚಾರ್ಜ್ ಪಾವತಿಸಬಹುದು. ಇಲ್ಲವಾದರೆ, ತಾನು ಆ ಶುಲ್ಕ ಪಾವತಿಸುವುದಿಲ್ಲ ಎಂದು ಕಡ್ಡಿಮುರಿದಂತೆ ಗ್ರಾಹಕ ಹೇಳಲು ಕಾನೂನಿನ ಬಲವಿರಲಿದೆ.
