ಮೈಸೂರಿನ ಪ್ರತಿಷ್ಠಿತ ಲಲಿತ ಮಹಲ್​ ಹೋಟೆಲ್​ ಅನ್ನು  ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಈ ಮೂಲಕ ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ಪಾರಂಪರಿಕ ಕಟ್ಟಡವನ್ನು ಖಾಸಗಿಯವರ ಪಾಲು ಮಾಡಲು ಕೇಂದ್ರ ಹೊರಟಿದ್ದು, ರಾಜ್ಯ ಸರ್ಕಾರದಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಮೈಸೂರು(ಜ.28): ಮೈಸೂರಿನ ಪ್ರತಿಷ್ಠಿತ ಲಲಿತ ಮಹಲ್​ ಹೋಟೆಲ್​ ಅನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಈ ಮೂಲಕ ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ಪಾರಂಪರಿಕ ಕಟ್ಟಡವನ್ನು ಖಾಸಗಿಯವರ ಪಾಲು ಮಾಡಲು ಕೇಂದ್ರ ಹೊರಟಿದ್ದು, ರಾಜ್ಯ ಸರ್ಕಾರದಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಖಾಸಗಿ ತೆಕ್ಕೆಗೆ ಲಲಿತ ಮಹಲ್ ಹೋಟೆಲ್​?

ಲಲಿತ ಮಹಲ್​ ಹೋಟೆಲ್​. ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲೊಂದು. ಸದ್ಯ ಈ ಪಾರಂಪರಿಕ ಹೋಟೆಲ್​ ರಾಜ್ಯ ಸರ್ಕಾರದ ಸುಪರ್ದಿಯಲ್ಲಿದ್ದು, ಕೇಂದ್ರ ಸರ್ಕಾರಿ ಸ್ವಾಮ್ಯದ ಐಟಿಡಿಸಿ ನಿರ್ವಹಣೆಯಲ್ಲಿದೆ. ಆದರೆ ಈಗ ಬಂಡವಾಳ ಹಿಂತೆಗೆತದ ಹೆಸರಿನಲ್ಲಿ ಈ ಹೋಟೆಲ್​ ಅನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಆದರೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಜ್ಯ ಸರ್ಕಾರದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ತನ್ನ ಪ್ರತಿರೋಧವನ್ನು ಕೂಡಾ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರ ಐಟಿಡಿಸಿ ನಿರ್ವಹಣೆಯಲ್ಲಿರುವ ಎಲ್ಲಾ ಪಂಚತಾರಾ ಹೋಟೆಲ್​'ಗಳನ್ನು ಖಾಸಗೀಕರಣಗೊಳಿಸಲು ತೀರ್ಮಾನ ತೆಗೆದುಕೊಂಡಿದೆ. ಮಹಾರಾಷ್ಟ್ರ, ರಾಜಸ್ಥಾನ, ಜಾರ್ಖಂಡ್​, ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರಗಳು ಸಹಮತ ವ್ಯಕ್ತಪಡಿಸಿದ್ದು, ಕರ್ನಾಟಕ ಸರ್ಕಾರ ತನ್ನ ವಿರೋಧ ವ್ಯಕ್ತಪಡಿಸಿದೆ. ಐಟಿಡಿಸಿಗೆ ನೀಡಲ್ಪಟ್ಟಿರುವ ಗುತ್ತಿಗೆ ಅವಧಿ 2023ಕ್ಕೆ ಮುಗಿಯಲಿದೆ. ಆದರೆ ಅದಕ್ಕೂ ಮುನ್ನ ಬಂಡವಾಳ ಹಿಂತೆಗೆತ ಹೆಸರಿನಲ್ಲಿ ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ.

ಆದದರೆ ಕೇಂದ್ರ ಸರ್ಕಾರಕ್ಕೆ ಖಾಸಗೀಕರಣಗೊಳಿಸುವ ಅಧಿಕಾರ ಇಲ್ಲ ಎನ್ನುವುದು ರಾಜ್ಯ ಸರ್ಕಾರದ ವಾದವಾಗಿದ್ದು, ಈಗಾಗಲೇ ರಾಜ್ಯ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್​ ಖರ್ಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್​ ಶರ್ಮಾ ಅವರೊಂದಿಗೆ ಒಂದು ಬಾರಿ ಮಾತುಕತೆಯನ್ನೂ ನಡೆಸಿದ್ದಾರೆ. ಇದಲ್ಲದೇ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲು ಕೂಡಾ ರಾಜ್ಯ ಸರ್ಕಾರ ನಿರ್ಧರಿಸಿದೆ.

ಕಿರಣ್​ ಹನಿಯಡ್ಕ, ಪೊಲಿಟಿಕಲ್​ ಬ್ಯೂರೋ, ಸುವರ್ಣ ನ್ಯೂಸ್​