ಬೆಂಗಳೂರು[ಸೆ.27]: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಂದೂಡಿರುವ ಕ್ರಮವನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕಟುವಾಗಿ ಟೀಕಿಸಿದ್ದಾರೆ.

‘ಸುಪ್ರೀಂಕೋರ್ಟ್‌ನಲ್ಲಿ ಚುನಾವಣೆ ಆಯೋಗ ಉಪಚುನಾವಣೆಯನ್ನು ಮುಂದೂಡಬಹುದು ಎಂಬುದಾಗಿ ತಿಳಿಸಿದ್ದರಿಂದ ತಡೆ ನೀಡಿ ಮುಂದೂಡಿಕೆಯಾಗಿರಬಹುದು. ಆಯೋಗಕ್ಕೆ ಕೇಂದ್ರ ಸರ್ಕಾರವೇ ಸೂಚನೆ ನೀಡಿರುವ ಸಾಧ್ಯತೆ ಇದೆ’ ಎಂದು ದೇವೇಗೌಡರು ಗಂಭೀರ ಆಪಾದನೆ ಮಾಡಿದ್ದಾರೆ.

ಗುರುವಾರ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಉಪಚುನಾವಣೆ ಮುಂದೂಡಿಕೆಯಾಗಿರುವ ಬೆಳವಣಿಗೆಯಿಂದಾಗಿ ಸ್ವಾಯತ್ತ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಸಮ್ಮಿಶ್ರ ಸರ್ಕಾರ ಪತನಕ್ಕಾಗಿ ಅನರ್ಹಗೊಂಡಿರುವ ಶಾಸಕರು ರಾಜೀನಾಮೆ ನೀಡುವುದರಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಭಾವ ಇದೆ. ಹಾಗೆಯೇ ಚುನಾವಣಾ ಆಯೋಗದ ಮೂಲಕ ಕೇಂದ್ರ ಸರ್ಕಾರವೇ ಚುನಾವಣೆ ಮುಂದೂಡಿಕೆ ಮಾಡಿಸಿರಬಹುದು. ಅನರ್ಹಗೊಂಡಿರುವ ಶಾಸಕರ ವಿಚಾರಣೆ ನಡೆಯುತ್ತಿರುವ ವೇಳೆ ಸುಪ್ರೀಂಕೋರ್ಟ್‌ ಮಧ್ಯಸ್ಥಿಕೆ ವಹಿಸಿದೆ ಎನ್ನಿಸುತ್ತದೆ ಎಂದು ಕಿಡಿಕಾರಿದರು.

ಸುಪ್ರೀಂಕೋರ್ಟ್‌ ನೊಟೀಸ್‌ ನೀಡದಿದ್ದರೂ ಹಾಗೂ ಯಾವುದೇ ಅರ್ಜಿ ಹಾಕದಿದ್ದರೂ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಬಂದು ವಾದ ಮಂಡಿಸಿತ್ತು. ಈ ನಡೆಯು ಸರಿಯಾದ ಕ್ರಮವಲ್ಲ. ಆಯೋಗ ಸ್ವತಂತ್ರವಾಗಿ ಕೆಲಸ ನಿರ್ವಹಣೆ ಮಾಡಬೇಕು. ಆದರೆ, ಆಯೋಗದ ನಡೆಯು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆಯೋಗದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಆಯೋಗದ ನಡೆ ಸರಿಯಲ್ಲ: ಎಚ್‌ಡಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ನ್ಯಾಯಾಲಯದ ಮುಂದೆ ಚುನಾವಣೆ ಮುಂದೂಡಬಹುದು ಎಂದು ಸ್ವಯಂ ಹೇಳಿಕೆ ನೀಡಿದೆ. ಸಂವಿಧಾನಿಕ ಸಂಸ್ಥೆಯಾದ ಆಯೋಗದ ನಡೆಯು ಸರಿಯಲ್ಲ. ಚುನಾವಣಾ ಆಯೊಗದ ಮೇಲೆ ಪ್ರಭಾವ ಬೀರಿದ್ದು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ಕೈಗೊಂಬೆಗಳನ್ನಾಗಿ ಮಾಡಿಕೊಂಡಿದೆ ಎಂದು ಟೀಕಾಪ್ರಹಾರ ನಡೆಸಿದರು.

ಸುಪ್ರೀಂಕೋರ್ಟ್‌ ವಿಚಾರಣೆಯಲ್ಲಿ ಆಯೋಗವು ಮಧ್ಯಪ್ರವೇಶ ಮಾಡಿರುವುದು ಸಂವಿಧಾನ ಆಶಯ ಕುಗ್ಗಿಸಿದಂತಾಗಿದೆ. ಈ ವ್ಯವಸ್ಥೆ ಮುಂದುವರಿದರೆ ಕರಾಳ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮಾತನಾಡಿ, ಉಪಚುನಾವಣೆ ಮುಂದೂಡಿರಬಹುದು. ಆದರೆ, ಸಭಾಧ್ಯಕ್ಷರ ಆದೇಶಕ್ಕೆ ತಡೆ ನೀಡಿಲ್ಲ. ಹೀಗಾಗಿ ಸಭಾಧ್ಯಕ್ಷರ ಆದೇಶ ಇನ್ನೂ ಜೀವಂತವಾಗಿದೆ. ರಾಜ್ಯ ಮುಖ್ಯಚುನಾವಣಾಧಿಕಾರಿ ಅನರ್ಹಗೊಂಡಿರುವ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಹೇಳಿಕೆ ನೀಡಿದರೆ, ಕೇಂದ್ರ ಚುನಾವಣಾ ಆಯೋಗವು ಸ್ಪರ್ಧಿಸಬಹುದು ಎಂದು ನ್ಯಾಯಾಲಯಕ್ಕೆ ತಿಳಿಸುತ್ತದೆ. ಈ ಹೇಳಿಕೆಯನ್ನು ಗಮನಿಸಿದರೆ ಯಾರು ದೊಡ್ಡವರು ಎಂಬುದು ಯಕ್ಷ ಪ್ರಶ್ನೆ ಮೂಡಿದೆ. ಇದಕ್ಕೆ ರಾಷ್ಟ್ರೀಯ ಪಕ್ಷಗಳು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಪಕ್ಷ ಸಂಘಟನೆಗಾಗಿ ತಂಡ ರಚನೆ

ಪಕ್ಷದ ಸಂಘಟನೆಗಾಗಿ ಆರು ತಂಡ ರಚನೆ ಮಾಡಲಾಗುವುದು. ಒಂದು ತಂಡದಲ್ಲಿ 10 ಮಂದಿ ಇದ್ದು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರಿಗೂ ಸಹ ತಂಡದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ದೇವೇಗೌಡರು ತಿಳಿಸಿದರು. ಈ ತಂಡಗಳು ರಾಜ್ಯದ 30 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷವನ್ನು ಬಲಗೊಳಿಸಲಿವೆ. ಎಲ್ಲಾ ಸಮುದಾಯಕ್ಕೆ ಸಮಾನ ಅವಕಾಶ ಸಿಗುವಂತೆ ಜಿಲ್ಲಾ, ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಉಪಚುನಾವಣೆ ದಿನಾಂಕ ನಿಗದಿಯಾಗಿದ್ದರಿಂದ ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲಾಯಿತು. ಈ ನಡುವೆ ನ್ಯಾಯಾಲಯದ ತೀರ್ಪು ಪ್ರಕಟಿಸಿತು. ಚುನಾವಣೆಯನ್ನು ಐಕ್ಯತೆಯಿಂದ ಎದುರಿಸುವ ಸಂಬಂಧ ಸಮಾಲೋಚನೆ ನಡೆಸಲಾಯಿತು. ಮಹಾಲಯ ಅಮಾವ್ಯಾಸೆ ಬಳಿಕ ಪಟ್ಟಿಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಆದರೆ, ತೀರ್ಪು ಬಂದ ಕಾರಣಕ್ಕಾಗಿ ತಾತ್ಕಾಲಿಕವಾಗಿ ಕೈ ಬಿಡಲಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.