ಅಪನಗದೀಕರಣ ಬಳಿಕ ಕನಿಷ್ಠ 2 ಲಕ್ಷ ಕೋಟಿ ರು. ಅಘೋಷಿತ ಸಂಪತ್ತು ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ. ಈ ಪೈಕಿ 1.75 ಲಕ್ಷ ಕೋಟಿ ರು. ಹಣವನ್ನು ಠೇವಣಿ ಮಾಡಿದವರು ಹಾಗೂ ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿರುವ 18 ಲಕ್ಷ ವ್ಯಕ್ತಿಗಳ ಮೇಲೆ ಕಣ್ಣಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನವದೆಹಲಿ(ಆ.16): ಅಪನಗದೀಕರಣ ಬಳಿಕ ಕನಿಷ್ಠ 2 ಲಕ್ಷ ಕೋಟಿ ರು. ಅಘೋಷಿತ ಸಂಪತ್ತು ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ. ಈ ಪೈಕಿ 1.75 ಲಕ್ಷ ಕೋಟಿ ರು. ಹಣವನ್ನು ಠೇವಣಿ ಮಾಡಿದವರು ಹಾಗೂ ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿರುವ 18 ಲಕ್ಷ ವ್ಯಕ್ತಿಗಳ ಮೇಲೆ ಕಣ್ಣಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ನಿಂತು ಮಂಗಳವಾರ ಭಾಷಣ ಮಾಡಿದ ಅವರು, 500 ಹಾಗೂ 1000೦ ರು. ಮುಖಬೆಲೆಯ ನೋಟುಗಳನ್ನು ಕಳೆದ ನವೆಂಬರ್'ನಲ್ಲಿ ರದ್ದು ಮಾಡಿದ್ದರಿಂದಾಗಿ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ 22 ಲಕ್ಷದಿಂದ 56 ಲಕ್ಷಕ್ಕೇರಿಕೆಯಾಗಿದೆ. ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗುತ್ತಿದ್ದ 3 ಲಕ್ಷಕ್ಕೂ ಅಧಿಕ ಶೆಲ್ ಅಥವಾ ಕಾಗದದ ಮೇಲಿನ ಕಂಪನಿಗಳು ಪತ್ತೆಯಾಗಿವೆ.
ಸ್ವತಂತ್ರ ಸಂಶೋಧನೆಗಳ ಪ್ರಕಾರ 3 ಲಕ್ಷ ಕೋಟಿ ರು.ನಷ್ಟು ದಾಖಲೆ ಇಲ್ಲದ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ ಎಂದರು. ತನ್ಮೂಲಕ ಅಪನಗದೀಕರಣ ಯಶಸ್ವಿಯಾಗಿದೆ ಎಂದು ಸಾರಿದರು. ತಮ್ಮ ಭಾಷಣದ ಬಹುಭಾಗವನ್ನು ಕಪ್ಪು ಹಣ ಕುರಿತು ಮಾತನಾಡುವುದಕ್ಕೇ ಮೀಸಲಿಟ್ಟ ಮೋದಿ ಅವರು, ಅಪನಗದೀಕರಣದ ಅವಧಿಯಲ್ಲಿ 2 ಲಕ್ಷ ರು.ಗೂ ಅಧಿಕ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡಿದವರು ಈಗ ಉತ್ತರಿಸಬೇಕಾಗಿದೆ. ನೋಟು ರದ್ದತಿಯಿಂದಾಗಿ ಹೊಸದಾಗಿ ಕಪ್ಪು ಹಣ ಸೃಷ್ಟಿಯಾಗುವುದು ತಪ್ಪಿದೆ ಎಂದು ಹೇಳಿದರು.
ಕಾಲ್ಪನಿಕ ಹಾಗೂ ಬೇರೊಬ್ಬರ ಹೆಸರಿನಲ್ಲಿ ಹೊಂದಲಾಗಿದ್ದ 800೦ ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ದೇಶವನ್ನು ಹಾಗೂ ಬಡವರನ್ನು ಲೂಟಿ ಹೊಡೆದವರು ಈಗ ಶಾಂತಿಯುತವಾಗಿ ನಿದ್ರೆ ಮಾಡಲು ಆಗುತ್ತಿಲ್ಲ. ಪ್ರಾಮಾಣಿಕರು ಸಂಭ್ರಮ ಪಡುತ್ತಿದ್ದಾರೆ. ಕಪ್ಪು ಹಣದ ವಿರುದ್ಧದ ಕೇಂದ್ರ ಸರ್ಕಾರದ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು. 18 ಲಕ್ಷ ಮಂದಿಯ ಆದಾಯ ಅವರು ಘೋಷಣೆ ಮಾಡಿದ್ದಕ್ಕಿಂತ ಹೆಚ್ಚಿದೆ ಎಂಬುದು ಗೊತ್ತಾಗಿದೆ. ಅವರು ಸಂಪತ್ತನ್ನು ಹೇಗೆ ಮಾಡಿಕೊಂಡರು ಎಂಬುದರ ಬಗ್ಗೆ ಉತ್ತರ ಕೊಡಬೇಕಾಗಿದೆ. 18 ಲಕ್ಷ ಮಂದಿಯ ಪೈಕಿ ಈಗಾಗಲೇ 4.5 ಲಕ್ಷ ಜನರು ತಪ್ಪು ಸರಿಪಡಿಸಿಕೊಳ್ಳಲು ಮುಂದೆ ಬಂದಿದ್ದಾರೆ.
ಈ ಪೈಕಿ ಒಂದು ಲಕ್ಷ ಮಂದಿ ಹಿಂದೆಂದೂ ತೆರಿಗೆ ಕಟ್ಟಿದವರಲ್ಲ. ಮೂರು ವರ್ಷಗಳ ಅವಧಿಯಲ್ಲಿ 1.25 ಲಕ್ಷ ಕೋಟಿ ರು ಕಪ್ಪು ಹಣ ಪತ್ತೆಯಾಗಿದ್ದು, ಅದನ್ನು ಹೊಂದಿದ್ದವರೇ ಮರಳಿಸುವಂತಹ ಸ್ಥಿತಿ ಸೃಷ್ಟಿಯಾಗಿದೆ ಎಂದು ಮೋದಿ ಮಾಹಿತಿ ನೀಡಿದರು.
3 ಲಕ್ಷ ಶೆಲ್ (ಖೊಟ್ಟಿ) ಕಂಪನಿಗಳನ್ನು ಸರ್ಕಾರ ಪತ್ತೆ ಹಚ್ಚಿದೆ. ಈ ಪೈಕಿ 400 ಕಂಪನಿಗಳು ಒಂದೇ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಈ ಬಗ್ಗೆ ವಿಚಾರಣೆಯೇ ಇರಲಿಲ್ಲ. ತೆರಿಗೆ ವಂಚಕರು ಹಾಗೂ ಅಧಿಕಾರಿಗಳ ಸಮ್ಮತಿಯೊಂದಿಗೆ ಈ ವ್ಯವಹಾರ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಬೇಕಾಯಿತು. ನೋಟು ರದ್ದತಿಯಿಂದಾಗಿ ಬ್ಯಾಂಕುಗಳಿಗೆ ಹಣ ಬಂದಿದೆ. ಹೀಗಾಗಿ ಬಡ್ಡಿ ದರ ಇಳಿಮುಖವಾಗಿದೆ. ಶ್ರೀಸಾಮಾನ್ಯರಿಗೆ ಹಣ ಸಿಗುತ್ತಿದೆ. ಬ್ಯಾಂಕುಗಳು ಬಡವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತಿವೆ ಎಂದು ತಿಳಿಸಿದರು.
