ಅಪನಗದೀಕರಣದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ನಿಷೇಧಿತ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ ವ್ಯಕ್ತಿಗಳಿಗೆ ಈಗ ಪೀಕಲಾಟ ಶುರುವಾಗಿದೆ. ಲಕ್ಷಾಂತರ ರೂ ಹಣವನ್ನು ಜಮೆ ಮಾಡಿ, ಆದಾಯ ತೆರಿಗೆ ವಿವರ ಸಲ್ಲಿಕೆ ಮಾಡಲು ವಿಫಲರಾಗಿರುವವರ ಪಟ್ಟಿಯನ್ನು ತಯಾರಿಸಿರುವ ಕೇಂದ್ರ ಸರ್ಕಾರ, ನೋಟಿಸ್ ನೀಡಲು ಆರಂಭಿಸಿದೆ.

ನವದೆಹಲಿ (ನ.29): ಅಪನಗದೀಕರಣದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ನಿಷೇಧಿತ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ ವ್ಯಕ್ತಿಗಳಿಗೆ ಈಗ ಪೀಕಲಾಟ ಶುರುವಾಗಿದೆ. ಲಕ್ಷಾಂತರ ರೂ ಹಣವನ್ನು ಜಮೆ ಮಾಡಿ, ಆದಾಯ ತೆರಿಗೆ ವಿವರ ಸಲ್ಲಿಕೆ ಮಾಡಲು ವಿಫಲರಾಗಿರುವವರ ಪಟ್ಟಿಯನ್ನು ತಯಾರಿಸಿರುವ ಕೇಂದ್ರ ಸರ್ಕಾರ, ನೋಟಿಸ್ ನೀಡಲು ಆರಂಭಿಸಿದೆ.

ಆರಂಭಿಕ ಹಂತದಲ್ಲಿ 25 ಲಕ್ಷ ರೂ. ಮೇಲ್ಪಟ್ಟು ನಿಷೇಧಿತ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿ, ಈವರೆಗೂ ಆದಾಯ ತೆರಿಗೆ ವಿವರ ಸಲ್ಲಿಸದ 1.16 ಲಕ್ಷ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲು ಪ್ರಾರಂಭಿಸಿದೆ. 2 ನೇ ಹಂತದಲ್ಲಿ ಮಿಕ್ಕವರಿಗೆ ನೋಟಿಸ್ ನೀಡಲಾಗುತ್ತದೆ. ನೋಟು ಅಮಾನ್ಯೀಕರಣದಿಂದಾಗಿ ಚಲಾವಣೆ ಕಳೆದುಕೊಂಡ 500, 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ಅವಕಾಶ ನೀಡಲಾಗಿತ್ತು. 2.5 ಲಕ್ಷ ರೂ ಮೇಲ್ಪಟ್ಟು ಠೇವಣಿ ಮಾಡಿದವರ ಮೇಲೆ ನಿಗಾ ಇಡುವುದಾಗಿಯೂ ಹೇಳಲಾಗಿತ್ತು. ಆದಾಗ್ಯೂ 18 ಲಕ್ಷ ವ್ಯಕ್ತಿಗಳು 2.5 ಲಕ್ಷ ರೂ ಮೇಲ್ಪಟ್ಟು ಜಮೆ ಮಾಡಿದ್ದಾರೆ. ಅಂತಹ ವ್ಯಕ್ತಿಗಳನ್ನು 2 ವಿಭಾಗ ಮಾಡಲಾಗಿದೆ. 25 ಲಕ್ಷ ಮೇಲ್ಪಟ್ಟು ಜಮೆ ಮಾಡಿದವರು ಹಾಗೂ 10 ರಿಂದ 25 ಲಕ್ಷ ರೂವರೆಗೆ ಜಮೆ ಮಾಡಿದವರು ಎಂದು ವರ್ಗೀಕರಿಸಲಾಗಿದೆ.

25 ಲಕ್ಷ ರೂ ಮೇಲ್ಪಟ್ಟು ಹಣವನ್ನು ಖಾತೆಗೆ ಹಾಕಿದ 1.16 ಲಕ್ಷ ಮಂದಿಗೆ ನೋಟಿಸ್ ಜಾರಿ ಮಾಡಿದ್ದು, 30 ದಿನದೊಳಗೆ ಆದಾಯ ತೆರಿಗೆ ವಿವರ ಸಲ್ಲಿಸಲು ತಾಕೀತು ಮಾಡಲಾಗಿದೆ. 10 ರಿಂದ 25 ಲಕ್ಷ ರೂ.ವರೆಗೆ ಜಮೆ ಮಾಡಿದ ಹಾಗೂ ತೆರಿಗೆ ವಿವರ ಸಲ್ಲಿಸದ 2.4 ಲಕ್ಷ ವ್ಯಕ್ತಿಗಳು ಪತ್ತೆಯಾಗಿದ್ದು, ಅವರಿಗೆ 2 ನೇ ಹಂತದಲ್ಲಿ ನೋಟಿಸ್ ಜಾರಿ ಮಾಡಲಾಗುತ್ತದೆ.