ಪ್ರಾಣಿಗಳ ಕ್ರೂರತನ ತಡೆ (ಜಾನುವಾರು ಮಾರುಕಟ್ಟೆ ನಿಯಂತ್ರಣ) ನಿಯಮಗಳು 2017ಕ್ಕೆ ತಿದ್ದುಪಡಿ ತಂದು ಮೇ 23 ರಂದು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹಿಂಪಡೆವ ಕುರಿತು ವಾರದ ಆರಂಭದಲ್ಲಿ ಕಾನೂನು ಸಚಿವಾಲಯಕ್ಕೆ ಕಡತ ರವಾನಿಸಲಾಗಿದೆ.
ನವದೆಹಲಿ(ಡಿ.1): ಜಾನುವಾರು ಜಾತ್ರೆ, ಮಾರುಕಟ್ಟೆಗಳಲ್ಲಿ ಹತ್ಯೆ ಉದ್ದೇಶಕ್ಕೆ ಗೋವುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಆರು ತಿಂಗಳ ಹಿಂದೆ ಹೊರಡಿಸಿದ್ದ ವಿವಾದಾತ್ಮಕ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಪ್ರಾಣಿಗಳ ಕ್ರೂರತನ ತಡೆ (ಜಾನುವಾರು ಮಾರುಕಟ್ಟೆ ನಿಯಂತ್ರಣ) ನಿಯಮಗಳು 2017ಕ್ಕೆ ತಿದ್ದುಪಡಿ ತಂದು ಮೇ 23 ರಂದು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹಿಂಪಡೆವ ಕುರಿತು ವಾರದ ಆರಂಭದಲ್ಲಿ ಕಾನೂನು ಸಚಿವಾಲಯಕ್ಕೆ ಕಡತ ರವಾನಿಸಲಾಗಿದೆ.
ಈ ಅಧಿಸೂಚನೆಯಲ್ಲಿ ಹಲವಾರು ವಿಷಯಗಳು ಇರುವುದರಿಂದ ಅವನ್ನು ಪರಿಷ್ಕರಿಸಬೇಕಾಗಿದೆ ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಾನುವಾರು ಮಾರುಕಟ್ಟೆಗೆ ಗೋವುಗಳನ್ನು ತರುವ ರೈತ, ಅವನ್ನು ಮಾರಾಟ ಮಾಡಿದಾಗ, ಹತ್ಯೆ ಉದ್ದೇಶಕ್ಕೆ ಮಾರಿಲ್ಲ ಎಂದು ಲಿಖಿತ ಘೋಷಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಇದಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಸಿದ್ಧಾಂತದ ಕಾರಣಕ್ಕೆ ಕೇಂದ್ರ ಸರ್ಕಾರ ಈ ನಿಷೇಧವನ್ನು ಹೇರಲು ಹಾಗೂ ದೇಶದ ಜನರ ಆಹಾರ ಅಭ್ಯಾಸವನ್ನು ಬದಲಿಸಲು ಹೊರಟಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಕೇಂದ್ರದ ಅಧಿಸೂಚನೆ ಜಾರಿಗೆ ಮೇ ಅಂತ್ಯದಲ್ಲಿ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಈ ನಿಷೇಧವನ್ನು ಸುಪ್ರೀಂಕೋರ್ಟ್ ಜುಲೈನಲ್ಲಿ ದೇಶಾದ್ಯಂತ ವಿಸ್ತರಿಸಿತ್ತು.
