ಕ್ರಿಶ್ಚಿಯನ್ ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುವುದಿದ್ದರೆ, ಕಾಯುವಿಕೆಯ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಕೆ
ನವದೆಹಲಿ(ಸೆ.10): ಕ್ರಿಶ್ಚಿಯನ್ ದಂಪತಿಗಳು ವಿಚ್ಛೇದನಕ್ಕೆ ಕನಿಷ್ಠ 2 ವರ್ಷ ಕಾಯಬೇಕು ಎನ್ನುವ 147 ವರ್ಷಗಳಷ್ಟು ಹಳೆಯ ಕಾನೂನಾತ್ಮಕ ನಿಯಮಕ್ಕೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಕೇಂದ್ರ ಕಾನೂನು ಸಚಿವಾಲಯ ಒಪ್ಪಿಗೆ ನೀಡಿದೆ. ಅದರಂತೆ, ಇನ್ನು ಮುಂದೆ ಕ್ರಿಶ್ಚಿಯನ್ ದಂಪತಿಯು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುವುದಿದ್ದರೆ, ಕಾಯುವಿಕೆಯ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಕೆಯಾಗಲಿದೆ.
1869ರ ವಿಚ್ಛೇದನ ಕಾಯ್ದೆಯ ನಿಬಂಧನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯವನ್ನೂ ಪಡೆದುಕೊಂಡೇ, ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಈಗ ಕ್ರಿಶ್ಚಿಯನ್ನರಲ್ಲೂ ಕಾಯುವಿಕೆ ಅವಧಿಯನ್ನು ಕಡಿತಗೊಳಿಸುವುದರಿಂದ ಸಮಾನ ಕಾನೂನು ಜಾರಿಯಾದಂತಾಗುತ್ತದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ವಿಶೇಷ ವಿವಾಹ ಕಾಯ್ದೆ, ಹಿಂದೂ ವಿವಾಹ ಕಾಯ್ದೆ, ಪಾರ್ಸಿ ವಿವಾಹ ಕಾಯ್ದೆ ಸೇರಿದಂತೆ ಹಲವು ಕಾನೂನುಗಳಲ್ಲಿ ವಿಚ್ಛೇದನದ ಕಾಯುವಿಕೆ ಅವಧಿ 1 ವರ್ಷವೇ ಆಗಿದೆ.
