ತಮ್ಮ ಮುಖ್ಯಸ್ಥರ ನಿವಾಸ ಮತ್ತು ಕಚೇರಿ ಮೇಲೆ ನಡೆದ ದಾಳಿ ಘಟನೆಯನ್ನು ಎನ್'ಡಿಟಿವಿ ಸಂಸ್ಥೆಯು ಪ್ರಜಾತಂತ್ರ ವ್ಯವಸ್ಥೆ ಹತ್ತಿಕ್ಕುವ ಪ್ರಯತ್ನ ಎಂದು ಟೀಕಿಸಿದೆ. ಅದೇ ಹಳೆಯ ಸುಳ್ಳು ಆರೋಪಗಳನ್ನು ಮುಂದಿಟ್ಟುಕೊಂಡು ಎನ್'ಡಿಟಿವಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಎನ್'ಡಿಟಿವಿ ಹೇಳಿಕೆ ನೀಡಿದೆ.

ನವದೆಹಲಿ(ಜೂನ್ 05): ಎನ್‌'ಡಿಟಿವಿ ಸುದ್ದಿವಾಹಿನಿಯ ಸಹ ಸಂಸ್ಥಾಪಕ ಹಾಗೂ ಕಾರ್ಯಪಾಲಕ ಸಹ-ಚೇರ್ಮನ್ ಪ್ರಣಾಯ್ ರಾಯ್ ಅವರ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ದೆಹಲಿ, ಡೆಹ್ರಾಡೂನ್ ಸೇರಿದಂತೆ ಪ್ರಣಾಯ್ ರಾಯ್ ಅವರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದೇಶಿ ಹೂಡಿಕೆ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದಡಿ ಈ ದಾಳಿ ನಡೆದಿದೆ.

ಪ್ರಣಾಯ್‌ ರಾಯ್ ಹಾಗೂ ಪತ್ನಿ ರಾಧಿಕಾ ರಾಯ್, ಹಾಗೂ ಖಾಸಗಿ ಕಂಪನಿ ಆರ್'ಆರ್'ಪಿಆರ್ ಹೋಲ್ಡಿಂಗ್ಸ್ ಹಣ ಮರುಪಾವತಿಸದೇ ಐಸಿಐಸಿಐ ಬ್ಯಾಂಕ್‌'ಗೆ ಸುಮಾರು 48 ಕೋಟಿ ರೂಪಾಯಿ ನಷ್ಟವಾಗಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸಿಬಿಐ ಕೇಸ್‌ ದಾಖಲಿಸಿದೆ. ಈ ಬೆನ್ನಲ್ಲೇ ಈ ದಾಳಿ ನಡೆದಿದೆ.

ಎನ್'ಡಿಟಿವಿ ವ್ಯಗ್ರ:
ತಮ್ಮ ಮುಖ್ಯಸ್ಥರ ನಿವಾಸ ಮತ್ತು ಕಚೇರಿ ಮೇಲೆ ನಡೆದ ದಾಳಿ ಘಟನೆಯನ್ನು ಎನ್'ಡಿಟಿವಿ ಸಂಸ್ಥೆಯು ಪ್ರಜಾತಂತ್ರ ವ್ಯವಸ್ಥೆ ಹತ್ತಿಕ್ಕುವ ಪ್ರಯತ್ನ ಎಂದು ಟೀಕಿಸಿದೆ. ಅದೇ ಹಳೆಯ ಸುಳ್ಳು ಆರೋಪಗಳನ್ನು ಮುಂದಿಟ್ಟುಕೊಂಡು ಎನ್'ಡಿಟಿವಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಎನ್'ಡಿಟಿವಿ ಹೇಳಿಕೆ ನೀಡಿದೆ.

ಭಾರತದಲ್ಲಿ ಮುಕ್ತ ವಾಕ್'ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಶಕ್ತಿಗಳಿಗೆ ನಾವು ತಲೆಬಾಗುವುದಿಲ್ಲ. ನಮ್ಮ ದೇಶಕ್ಕಾಗಿ ನಾವು ಹೋರಾಟ ನಡೆಸುತ್ತೇವೆ ಎಂದು ರಾಷ್ಟ್ರೀಯ ಸುದ್ದಿವಾಹಿನಿ ಹೇಳಿದೆ.

ಸ್ವಾಮಿ ಆಗ್ರಹ:
ಕಳೆದ ವರ್ಷ ಬಿಜೆಪಿ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿಯವರು ಎನ್'ಡಿಟಿವಿಯಿಂದ ಹಣದ ಅವ್ಯವಹಾರವಾಗಿದೆ ಎಂದು ಆರೋಪಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. "ಎಂಥವರೇ ಆಗಿದ್ದರೂ ಕಾನೂನಿನ ಭಯ ಇರಬೇಕು" ಎಂದು ಹೇಳಿದ್ದ ಸುಬ್ರಮಣಿಯನ್ ಸ್ವಾಮಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎನ್'ಡಿಟಿವಿ ವಿರುದ್ಧ ಪ್ರಕರಣ ದಾಖಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಪ್ರಧಾನಿ ಮೋದಿಯವರನ್ನು ಆಗ್ರಹಿಸಿದ್ದರು.