ನವದೆಹಲಿ: ಬೇಲಿಯೇ ಎದ್ದು ಹೊಲ ಮೇಯಿತು ಎನ್ನುವಂತೆ ಭ್ರಷ್ಟಾಚಾರದ ತನಿಖೆಗೆ ಇರುವ ಸಿಬಿಐನ ಅಧಿಕಾರಿಯೊಬ್ಬರೇ ಇದೀಗ, ಭ್ರಷ್ಟಾಚಾರದ ಕಳಂಕಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ದೆಹಲಿಯಲ್ಲಿನ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯೊಬ್ಬರ ಮೇಲೆ, ಬೇರೊಂದು ಪ್ರಕರಣದ ತನಿಖೆ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪ ಕೇಳಿಬಂದಿದೆ. ಹೀಗಾಗಿ ಸಿಬಿಐ ಅಧಿಕಾರಿಯ ವಿರುದ್ಧವೇ ಸ್ವತಃ ಸಿಬಿಐ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಪ್ರಕರಣ ಹಿನ್ನೆಲೆ: ವಿವೇಕ್‌ ಬಾತ್ರಾ ಎಂಬ ಭಾರತೀಯ ಕಂದಾಯ ಸೇವೆ ಅಧಿಕಾರಿ ವಿರುದ್ಧ ಸಿಬಿಐ ಭ್ರಷ್ಟಾಚಾರ ಪ್ರಕರಣವೊಂದರ ವಿಚಾರಣೆ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ತನಿಖೆಯ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಬಾತ್ರಾ, ರಾಕೇಶ್‌ ತಿವಾರಿ ಎಂಬ ಮಧ್ಯವರ್ತಿ ಮೂಲಕ 35 ಲಕ್ಷ ರು.ಗೆ ಡೀಲ್‌ ಕುದುರಿಸಿದ್ದ.

ಈ ಕುರಿತ ಮೊದಲ ಕಂತಿನ 15 ಲಕ್ಷ ರು. ಸ್ವೀಕರಿಸುವಾಗ ಆತನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಜೊತೆಗೆ ಆತನ ಮನೆ ಮೇಲೆ ದಾಳಿ ನಡೆಸಿದ ವೇಳೆ 2.5 ಕೋಟಿ ರು.ಮೌಲ್ಯದ ನಗದು ಮತ್ತು ಆಭರಣ ವಶಪಡಿಸಿಕೊಂಡಿದ್ದರು. ಜೊತೆಗೆ ಪರಿಶೀಲನೆ ವೇಳೆ, ಸಿಬಿಐ ಅಧಿಕಾರಿಯೊಬ್ಬರ ಜೊತೆ ನಂಟುಹೊಂದಿರುವುದು ಕೂಡಾ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆ ಶಂಕಿತ ಸಿಬಿಐ ಅಧಿಕಾರಿ ವಿರುದ್ಧ ಇದೀಗ ಸಿಬಿಐ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.