ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಈ ಸಾವು ಆತ್ಮಹತ್ಯೆಯೂ, ಕೊಲೆಯೂ ಎಂಬ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿತ್ತು.

ಬೆಂಗಳೂರು(ಜೂ.17): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಈ ಸಾವು ಆತ್ಮಹತ್ಯೆಯೂ, ಕೊಲೆಯೂ ಎಂಬ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿತ್ತು.

ತಿವಾರಿ ಕುಟುಂಬಸ್ಥರ ದೂರಿನ ಹಿನ್ನೆಲೆಯಲ್ಲಿ ಸಿಬಿಐ ಎಫ್ ಐಆರ್ ದಾಖಲಿಸಿಕೊಂಡಿದೆ. ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಅಸಹಜ ಸಾವು ಪ್ರಕರಣ ಸಾಕಷ್ಟು ಗೊಂದಲ ಉಂಟು ಮಾಡಿತ್ತು. ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ತರಬೇತಿಯೊಂದರಲ್ಲಿ ಭಾಗವಹಿಸಿದ್ದ ಅನುರಾಗ್ ತಿವಾರಿ, ಮೇ. 17 ರಂದು ವಾಯು ವಿಹಾರಕ್ಕೆ ತೆರಳಿದ್ದ ವೇಳೆ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಭ್ರಷ್ಟಾಚಾರ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.

ಇನ್ನು, ಅನುರಾಗ್ ತಿವಾರಿ ಸಾವು ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದು ಅನುರಾಗ್ ತಿವಾರಿ ಕುಟುಂಬಸ್ಥರು ಆರೋಪಿಸಿದ್ದರು. ತಿವಾರಿ ಸಹೋದರ ಮಯಾಂಕ್ ತಿವಾರಿ, ತಮ್ಮ ಸಹೋದರ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ವ್ಯವಸ್ಥಿತ ಕೊಲೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿತ್ತು. ಇದೀಗ, ಸಿಬಿಐ ಅಧಿಕಾರಿಗಳು ಎಫ್ ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.