ಬೆಂಗಳೂರು: ಐನೂರು, ಸಾವಿರ ಮುಖ​ಬೆ​ಲೆಯ ನೋಟು​ಗಳ ಅಮಾ​ನ್ಯದ ಬಳಿಕ ನೋಟು ಬದಲಾವಣೆಯಲ್ಲಿ ನಡೆದಿದ್ದ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ(ಸಿಬಿಐ)ದ ಭ್ರಷ್ಟಾಚಾರ ನಿಗ್ರಹ ದಳ ವಿವಿಧ ಬ್ಯಾಂಕ್‌ಗಳ ಬೆನ್ನು ಬಿದ್ದಿದೆ. ಬ್ಯಾಂಕ್‌ಗಳಲ್ಲಿ ವಿವಿಧ ಖಾತೆದಾರರು ನಡೆಸಿರುವ ಅನುಮಾನಾಸ್ಪದ ನಗದು ವಹಿವಾಟುಗಳ ಮೇಲೆ ಕಣ್ಣಿಟ್ಟು ತಪಾಸಣೆ ಮುಂದುವರಿಸಿರುವ ಸಿಬಿಐನ ಎಸಿಬಿ ವಿಭಾಗ ಈಗ ಮತ್ತೊಂದು ಎಫ್‌ಐಆರ್‌ ದಾಖಲಿಸಿದೆ.

ಈ ಚಟುವಟಿಕೆಗೆ ಜನ್‌ಧನ್‌ ಖಾತೆಯೂ ಬಳಕೆ ಆಗಿರುವುದು, ಡಿ.ಡಿ.ಗಳ ಮೂಲಕ ವ್ಯವಹರಿಸಿ​ರುವುದನ್ನೂ ಅಧಿಕಾರಿಗಳು ತನಿಖೆ ವೇಳೆ ಪತ್ತೆ​ಹ​ಚ್ಚಿ​ದ್ದಾ​ರೆ. ಈ ಚಟುವಟಿಕೆಗಳಲ್ಲಿ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳ ಪಾತ್ರ​ವನ್ನೂ ಪತ್ತೆ ಹಚ್ಚಿರುವ ಸಿಬಿಐ ಅಧಿಕಾರಿಗಳು, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬೆಂಗಳೂರಿನ ಬಸವನಗುಡಿಯ ಶಾಖೆಯ ಹಿರಿಯ ಪ್ರಬಂಧಕ ಸೇರಿ ಬೆಂಗಳೂರಿನಲ್ಲಿ ಓಂಕಾರ್‌ ಪರಿಮಳ್‌ ಮಂದಿರ್‌ ಹೆಸರಿನಲ್ಲಿ ಉದ್ಯಮ ನಡೆಸುತ್ತಿರುವ ಇಬ್ಬರು ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಇವರ ವಿರುದ್ಧ ಐಪಿಸಿ 420, 120 ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ 13(2), 13(1) ಸೆಕ್ಷನ್‌ನಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. 

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬಸವನ​ಗುಡಿಯ ಶಾಖೆಯ ಕೆಲ ಖಾತೆದಾರರು ಅನುಮಾ​ನಾಸ್ಪದ ವ್ಯವಹಾರಗಳನ್ನು ನಡೆಸಿರುವುದರಲ್ಲಿ ಶಾಖೆಯ ಹಿರಿಯ ಪ್ರಬಂಧಕರೂ ಭಾಗಿಯಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಬಜಾಜ್‌ ಫೈನಾನ್ಸ್‌: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಲವು ವ್ಯಕ್ತಿಗಳಿಗೆ ನ.8ರಂದು ವಿತರಿಸಿದ್ದ ಡಿ.ಡಿ. ಮತ್ತು ಚೆಕ್‌ಗಳ ಮೂಲಕ ನಡೆದಿರುವ ಅಕ್ರಮ ಚಟುವಟಿಕೆಯನ್ನು ಪತ್ತೆ ಹಚ್ಚಿರುವುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ. ಇದೇ ಪ್ರಕರಣದಲ್ಲಿ ಪುಣೆ ಮೂಲದ ಬಜಾಜ್‌ ಫೈನಾನ್ಸ್‌ ಲಿಮಿಟೆಡ್‌ ಭಾಗಿಯಾಗಿರುವುದು ಎಫ್‌ಐಆರ್‌ನಿಂದ ಗೊತ್ತಾಗಿದೆ.

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬೆಂಗಳೂರಿನ ಬಸವನಗುಡಿ ಶಾಖೆಯ ಸೀನಿಯರ್‌ ಮ್ಯಾನೇಜರ್‌ ಲಕ್ಷ್ಮಿನಾರಾಯಣ ನ.15ರಿಂದ 18ರವರೆಗೆ ಒಟ್ಟು 71.49ಲಕ್ಷ ರೂ.ನಿಂದ 500, 1000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಿದ್ದರು. ನಂತರ 50,000 ರೂ.ಗೆ ಕಡಿಮೆ ಇಲ್ಲದಂತೆ ಒಟ್ಟು 149 ಡಿ.ಡಿ.ಗಳನ್ನು ಬಜಾಜ್‌ ಫೈನಾನ್ಸ್‌ ಲಿಮಿಟೆಡ್‌ ಹೆಸರಲ್ಲಿ ವಿತರಿಸಿದ್ದರು. ಬೆಂಗಳೂರಿನ ಓಂಕಾರ್‌ ಪರಿಮಳ್‌ ಮಂದಿರ್‌ ಉದ್ಯಮದ ಪಾಲುದಾರರಾದ ಗೋಪಾಲ್‌ ಮತ್ತು ಅಶ್ವಿನ್‌ ಜಿ. ಸುಂಕು ಅವರು ಈ ಡಿ.ಡಿಗಳನ್ನು ಖರೀದಿಸಿದ್ದರು.

ನಂತರ ಬ್ಯಾಂಕ್‌ನಲ್ಲಿ 71.49 ಲಕ್ಷ ರೂ. ಮೊತ್ತವನ್ನು ಹಳೆ ನೋಟುಗಳ ಮೂಲಕ ಜಮೆ ಮಾಡಿದ್ದರು. ಓಂಕಾರ್‌ ಪರಿಮಳ್‌ ಮಂದಿರ್‌'ನ ಖಾತೆಗಳನ್ನು ಶೋಧಿಸಿದಾಗ ಅದು ಎನ್‌ಪಿಎ ಎಂದು ತಿಳಿದು ಬಂದಿದೆ. ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬಸವನಗುಡಿ ಶಾಖೆಯಲ್ಲಿ ಹೊಂದಿರುವ ಖಾತೆಗಳು ಗೋಪಾಲ್‌ ಮತ್ತು ಅಶ್ವಿನಿ ಹೆಸರಲ್ಲದೆ, ಇವರ ಕುಟುಂಬದ ಸದಸ್ಯರ ಹೆಸರಿನಲ್ಲೂ ಇರುವುದನ್ನು ಪತ್ತೆ ಹಚ್ಚಲಾಗಿದೆ. ಈ ಖಾತೆಗಳ ಪೈಕಿ ಬಹುತೇಕ ಖಾತೆಗಳು ಉಳಿತಾಯ ಖಾತೆ, ಸಾಲದ ಖಾತೆ, ಓ.ಡಿ, ಚಿನ್ನದ ಸಾಲ, ವಾಹನ ಸಾಲ ಖಾತೆಗಳ ಸ್ವರೂಪದ್ದು.

ಖಾತೆಗಳಿಗೆ ಹಣ ಒಳ ವರ್ಗಾವಣೆ: ಗೋಪಾಲ್‌ ವಿಜಯಲಕ್ಷ್ಮಿ, ಶ್ವೇತಾ ಅಶ್ವಿನ್‌ ಎಸ್‌, ಶ್ರೀವತ್ಸ ಅರ್ಜುನ್‌ ಸುಂಕು, ಅರ್ಜುನ್‌ ಜಿ ಸುಂಕು, ಆರ್ಯನ್‌ ಅರೋಮಾಸ್‌, ಆರ್ಯನ್‌ ಫ್ರಾಗ್ರೆನ್ಸ್‌ ಹೆಸರಿನಲ್ಲಿ ಖಾತೆಗಳಿವೆ. ಕೆಲ ಖಾತೆಗಳು 2016ರ ನ.28ರಂದು ಮುಕ್ತಾಯಗೊಂಡಿವೆ. 3.00 ಕೋಟಿ ಅಲ್ಲದೆ 60, 80 ಲಕ್ಷ ರೂ. ಮೊತ್ತದ ಮಿತಿವರೆಗೆ ನಗದು ಜಮೆ ಆಗಿರುವುದು ತಿಳಿದು ಬಂದಿದೆ. ನ.10ರಿಂದ ಇಲ್ಲಿವರೆಗೆ ಅತಿ ಹೆಚ್ಚು ಮೊತ್ತವನ್ನು ಖಾತೆಗಳಲ್ಲಿ ಠೇವಣಿ ಇರಿಸಿದ್ದಾರೆ. ಕುಟುಂಬ ಸದಸ್ಯರು ಪರಸ್ಪರ ಖಾತೆ​ಗಳಿಗೆ ಹಣವನ್ನು ಒಳ ವರ್ಗಾವಣೆ ಮಾಡಿರು​ವುದನ್ನು ವಿಚಾರಣೆ ವೇಳೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿ​ದ್ದಾರೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಧನಭಾಗ್ಯ ಕಣ್ಣಪ್ಪ ಎಂಬುವರು ಹೊಂದಿದ್ದ ಜನ್‌ಧನ್‌ ಖಾತೆಗೆ ಹಳೇ ನೋಟುಗಳ ಒಟ್ಟು ಮೊತ್ತ 2.30 ಲಕ್ಷ ರೂ.ನಷ್ಟು ನ.13ರಂದು ಜಮೆ ಆಗಿದೆ. ಅದೇ ದಿನ ಓಂಕಾರ್‌ ಪರಿಮಳ್‌ ಮಂದಿರ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬೆಂಗಳೂರಿನ ಬಸವನಗುಡಿ ಶಾಖೆಯಲ್ಲಿ ಹೊಂದಿರುವ (3295120670) ಖಾತೆಗೆ ಮೊತ್ತ ವರ್ಗಾವಣೆ ಆಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. 

ಅದೇ ರೀತಿ ಒಟ್ಟು 1.24 ಕೋಟಿ ರೂ. ಮೊತ್ತದ ಹಳೇ ನೋಟು​ಗ​ಳನ್ನು ಗೋಪಾಲ್‌ ಮತ್ತು ಅಶ್ವಿನ್‌ ಜಿ. ಸುಂಕು ಹಾಗೂ ಇವರ ಕುಟುಂಬದ ಸದಸ್ಯರು ಹೊಂದಿದ್ದಾರೆ ಎನ್ನಲಾದ ವಿವಿಧ ಖಾತೆಗಳಿಗೆ ಜಮೆ ಆಗಿದೆ. ನಂತರ ಇದೇ ಹಣ ಓಂಕಾರ್‌ ಪರಿಮಳ್‌ ಮಂದಿರ್‌ ಹೊಂದಿರುವ ಖಾತೆಗೆ ವರ್ಗಾವಣೆ ಆಗಿರುವುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

ಕ್ಯಾಷ್‌ ಮೆಮೊರೆಂಡಮ್‌ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಪರಿಶೀಲಿಸಿದ್ದು, ಈ ವೇಳೆಯಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಶಾಖೆಯಲ್ಲಿ ನ.15 ಮತ್ತು 25ರಂದು . 86,37,900 ರೂ.ಮೊತ್ತದ ನಗದು ಇತ್ತು ಎಂಬುದನ್ನು ಪತ್ತೆ ಹಚ್ಚಿರುವುದು ಎಫ್‌ಐಆರ್‌ನಿಂದ ಗೊತ್ತಾಗಿದೆ. 

- ಜಿ.ಮಹಾಂತೇಶ್‌, ಸುವರ್ಣನ್ಯೂಸ್

epaper.kannadaprabha.in