ವಿದೇಶದಿಂದ ಕಾರು ಖರೀದಿಸಿ ಸುಳ್ಳು ದಾಖಲೆ ಪತ್ರಗಳನ್ನು ನೀಡಿದ್ದ ನಟರಾಜನ್ ಸರ್ಕಾರದ ಬೊಕ್ಕಸಕ್ಕೆ 1 ಕೋಟಿ ರು. ಹಾನಿ ಮಾಡಿದ ಆರೋಪ ಹೊತ್ತಿದ್ದಾರೆ.

ಚೆನ್ನೈ(ಫೆ.20): ಬೆಂಗಳೂರು ಜೈಲಿನಲ್ಲಿರುವ ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರ ಪತಿ ಎಂ. ನಟರಾಜನ್ ಅವರಿಗೂ ಜೈಲು ಶಿಕ್ಷೆಯಾಗುವ ಸಂಭವ ಇದೆ. 1994ರಲ್ಲಿ ಐಷಾರಾಮಿ ಲೆಕ್ಸಸ್ ಕಾರು ಖರೀದಿಸಿ ಸುಂಕ ವಂಚನೆ ಮಾಡಿದ ಆರೋಪ ನಟರಾಜನ್ ಅವರ ಮೇಲೆ ಇದ್ದು ಇದರ ಅಂತಿಮ ವಿಚಾರಣೆ ಮದ್ರಾಸ್ ಹೈಕೋರ್ಟ್‌ನಲ್ಲಿ ಫೆಬ್ರವರಿ 27ರಿಂದ ಆರಂಭವಾಗಲಿದೆ.

ನಟರಾಜನ್ ಮತ್ತು ಇತರ ಮೂವರು ಸಂಚು, ಫೋರ್ಜರಿ, ವಂಚನೆ ಮತ್ತು ತೆರಿಗೆ ವಂಚನೆಗೆ ಸಂಬಂಧಿಸಿದಂತಗೆ ಸಿಬಿಐ ನ್ಯಾಯಾಲಯದಿಂದ 2010ರಲ್ಲೇ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಇವರ ಜೈಲು ಶಿಕ್ಷೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿತ್ತು.

ಈಗ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ತ್ವರಿತಗೊಳಿಸಲು ಸಿಬಿಐ ಮನವಿ ಮಾಡಿದೆ. ಈ ಪ್ರಕಾರ ಅಂತಿಮ ವಿಚಾರಣೆ ಫೆಬ್ರವರಿ 27ರಿಂದ ಆರಂಭವಾಗಲಿದೆ. ಹೀಗಾಗಿ ಪತ್ನಿಯ ಬೆನ್ನಲ್ಲೇ ಪತಿಗೂ ಜೈಲುಭೀತಿ ಶುರುವಾಗಿದೆ.

ವಿದೇಶದಿಂದ ಕಾರು ಖರೀದಿಸಿ ಸುಳ್ಳು ದಾಖಲೆ ಪತ್ರಗಳನ್ನು ನೀಡಿದ್ದ ನಟರಾಜನ್ ಸರ್ಕಾರದ ಬೊಕ್ಕಸಕ್ಕೆ 1 ಕೋಟಿ ರು. ಹಾನಿ ಮಾಡಿದ ಆರೋಪ ಹೊತ್ತಿದ್ದಾರೆ.