ಕೇಂದ್ರ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ರಾತ್ರೋ ರಾತ್ರಿ ಅಚ್ಚರಿಯ ಬೆಳವಣಿಗೆಗಳು ನಡೆದಿದ್ದು ಕೇಂದ್ರ ಸರ್ಕಾರ ಸಿಬಿಐಗೆ ಕತ್ತರಿ ಪ್ರಯೋಗ ಮಾಡಿದೆ. 

ನವದೆಹಲಿ : ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿರುವ ‘ಕೇಂದ್ರೀಯ ತನಿಖಾ ದಳ’ (ಸಿಬಿಐ)ದ ಪ್ರತಿಷ್ಠೆಗೆ ಕುಂದುಂಟಾಗುವಂತೆ ವರ್ತಿಸಿದ ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಹಾಗೂ ಉಪಮುಖ್ಯಸ್ಥ ರಾಕೇಶ್‌ ಅಸ್ಥಾನಾ ಅವರ ಅಧಿಕಾರಕ್ಕೆ ಕೇಂದ್ರ ಸರ್ಕಾರ ರಾತ್ರೋರಾತ್ರಿ ಕತ್ತರಿ ಪ್ರಯೋಗ ಮಾಡಿದೆ. ಬಹಿರಂಗವಾಗಿ ಕಿತ್ತಾಡುವ ಮೂಲಕ ಸಿಬಿಐನ ಮರಾರ‍ಯದೆಯನ್ನು ಹರಾಜು ಹಾಕಿದ ಈ ಇಬ್ಬರೂ ಉನ್ನತ ಅಧಿಕಾರಿಗಳನ್ನು ಮಂಗಳವಾರ ತಡರಾತ್ರಿ ರಜೆಯ ಮೇಲೆ ಕಳುಹಿಸಿರುವ ಸರ್ಕಾರ, ಸಿಬಿಐನ ಜಂಟಿ ನಿರ್ದೇಶಕರಾಗಿರುವ ಒಡಿಶಾ ಕೇಡರ್‌ ಐಪಿಎಸ್‌ ಅಧಿಕಾರಿ ಎಂ. ನಾಗೇಶ್ವರ ರಾವ್‌ ಅವರಿಗೆ ಸಿಬಿಐನ ಹೊಣೆಗಾರಿಕೆಯನ್ನು ಹಂಗಾಮಿಯಾಗಿ ವಹಿಸಿದೆ.

ಮಂಗಳವಾರ ತಡರಾತ್ರಿ 2 ಗಂಟೆ ಸುಮಾರಿಗೆ ಅಧಿಕಾರ ವಹಿಸಿಕೊಂಡ ಕೂಡಲೇ ನಾಗೇಶ್ವರರಾವ್‌ ಅವರು, ರಾಕೇಶ್‌ ಅಸ್ಥಾನಾ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದ ತಂಡವನ್ನು ಸಂಪೂರ್ಣ ಬದಲಾವಣೆ ಮಾಡಿದ್ದಾರೆ. ಹಾಲಿ ತನಿಖಾಧಿಕಾರಿಯಾಗಿದ್ದ ಡಿಎಸ್‌ಪಿ ಎ.ಕೆ. ಬಸ್ಸಿ ಅವರನ್ನು ‘ಸಾರ್ವಜನಿಕ ಹಿತಾಸಕ್ತಿ’ಯ ಕಾರಣವೊಡ್ಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಡಮಾನ್‌- ನಿಕೋಬಾರ್‌ ದ್ವೀಪ ಸಮೂಹದ ಪೋರ್ಟ್‌ಬ್ಲೇರ್‌ಗೆ ಎತ್ತಂಗಡಿ ಮಾಡಿದ್ದಾರೆ. ಅವರ ಜಗಕ್ಕೆ ಸತೀಶ್‌ ಡಾಗರ್‌ ಎಂಬ ಅಧಿಕಾರಿಯನ್ನು ನಿಯೋಜಿಸಿದ್ದಾರೆ. ಒಟ್ಟಾರೆ 13 ಅಧಿಕಾರಿಗಳ ವರ್ಗಾವಣೆ ನಡೆದಿದ್ದು, ಇವರೆಲ್ಲಾ ಅಲೋಕ್‌ ವರ್ಮಾ ಗುಂಪಿಗೆ ಸೇರಿದವರು ಎಂದು ಹೇಳಲಾಗಿದೆ.

ಈ ನಡುವೆ, ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದೆ.

ವಿವಾದಕ್ಕೆ ಹಿನ್ನೆಲೆ: ಹಲವು ಅಧಿಕಾರಿಗಳ ಹಿರಿತನವನ್ನು ಬದಿಗೊತ್ತಿ ಗುಜರಾತ್‌ ಕೇಡರ್‌ನ ಐಪಿಎಸ್‌ ಅಧಿಕಾರಿ ರಾಕೇಶ್‌ ಅಸ್ಥಾನಾ ಅವರನ್ನು ಸಿಬಿಐಗೆ ನೇಮಕ ಮಾಡಿದ್ದೂ ಅಲ್ಲದೆ, ವಿಶೇಷ ನಿರ್ದೇಶಕ ಪಟ್ಟನೀಡುವ ಮೂಲಕ ನಂ.2 ಸ್ಥಾನಕ್ಕೆ ತಂದಿದ್ದು ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಅಂದಿನಿಂದಲೂ ಅಲೋಕ್‌ ಹಾಗೂ ಅಸ್ಥಾನಾ ನಡುವೆ ಮುಸುಕಿನ ಗುದ್ದಾಟಗಳು ನಡೆಯುತ್ತಿದ್ದವು.

ಈ ನಡುವೆ, ಅಲೋಕ್‌ ವರ್ಮಾ ಅವರು ಮಾಂಸದ ರಫ್ತುಗಾರ ಮೊಯಿನ್‌ ಖುರೇಷಿ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಸತೀಶ್‌ ಸನಾ ಎಂಬಾತನಿಗೆ ಕ್ಲೀನ್‌ಚಿಟ್‌ ನೀಡಲು ಲಂಚ ಪಡೆದಿದ್ದಾರೆ. ಇಂತಹ 10 ಆರೋಪಗಳು ಅವರ ಮೇಲಿವೆ ಎಂದು ಕೇಂದ್ರೀಯ ವಿಚಕ್ಷಣ ದಳಕ್ಕೆ ಅಸ್ಥಾನ ದೂರು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಸ್ಥಾನಾ ವಿರುದ್ಧವೇ ಸತೀಶ್‌ ಸನಾ ಲಂಚದ ಆರೋಪ ಮಾಡಿದ್ದ. ಈ ಹಿನ್ನೆಲೆಯಲ್ಲಿ ಅ.15ರಂದು ಅಸ್ಥಾನಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಈ ಮಧ್ಯೆ, ಹಲವು ಪ್ರತಿಷ್ಠಿತ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ಅಸ್ಥಾನಾ ತಂಡದಲ್ಲಿದ್ದ ಡಿಎಸ್ಪಿ ದೇವೇಂದ್ರ ಕುಮಾರ್‌ ಅವರನ್ನು ವರ್ಮಾ ಸಿಲುಕಿಸಲು ದಾಖಲೆ ತಿದ್ದಿದ ಆರೋಪ ಸಂಬಂಧ ಸಿಬಿಐ ಬಂಧಿಸಿತ್ತು. ಸಿಬಿಐ ಕೇಂದ್ರ ಕಚೇರಿ ಮೇಲೂ ದಾಳಿ ನಡೆಸಿ ಅಧಿಕಾರಿಗಳು ಶೋಧ ಮಾಡಿದ್ದರು. ಸಿಬಿಐನ ಉಪಮುಖ್ಯಸ್ಥರ ಮೇಲೆ ಪ್ರಕರಣ ದಾಖಲಿಸಿದ್ದು ಹಾಗೂ ಸಿಬಿಐನ ಕೇಂದ್ರ ಕಚೇರಿ ಮೇಲೆಯೇ ಸಿಬಿಐ ದಾಳಿ ನಡೆದಿದ್ದು ದೇಶದ ಇತಿಹಾಸದಲ್ಲಿ ಯಾವತ್ತಿಗೂ ಆಗಿರಲಿಲ್ಲ. ಹೀಗಾಗಿ ಪ್ರಕರಣ ಭಾರಿ ಚರ್ಚೆಗೆ ಕಾರಣವಾಗಿತ್ತು.

ಸಿವಿಸಿ ಶಿಫಾರಸು: ಈ ಹಿನ್ನೆಲೆಯಲ್ಲಿ ಸಿವಿಸಿ ಮಂಗಳವಾರ ರಾತ್ರಿ ಕೇಂದ್ರ ಸರ್ಕಾರಕ್ಕೆ ಇಬ್ಬರೂ ಅಧಿಕಾರಿಗಳ ವಿರುದ್ಧ ಕ್ರಮ ಶಿಫಾರಸು ಮಾಡಿತ್ತು. ತಮ್ಮ ವಿರುದ್ಧ ಅಸ್ಥಾನಾ ಮಾಡಿದ್ದ ಆರೋಪಗಳ ಕುರಿತಂತೆ ಅಲೋಕ್‌ ವರ್ಮಾ ಸರಿಯಾಗಿ ಸಹಕರಿಸಿಲ್ಲ, ಕೇಳಿದ ಕಡತಗಳನ್ನು ಕಳುಹಿಸಿಲ್ಲ, ಆಸ್ಥಾನಾ ವಿರುದ್ಧ ಆರೋಪ ಕೇಳಿಬಂದಿರುವ ಕ್ರಮ ಅನಿವಾರ್ಯ ಎಂದು ಹೇಳಿತ್ತು. ರಾತ್ರೋರಾತ್ರಿ ಪ್ರಧಾನಿ ಅಧ್ಯಕ್ಷತೆಯಲ್ಲಿ ನೇಮಕಾತಿಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆ ಸೇರಿ ಇಬ್ಬರ ಅಧಿಕಾರಕ್ಕೂ ಕತ್ತರಿ ಪ್ರಯೋಗಿಸಿ, ರಜೆ ಮೇಲೆ ಕಳುಹಿಸುವ ನಿರ್ಧಾರವನ್ನು ತೆಗೆದುಕೊಂಡಿತು.

ತಡರಾತ್ರಿ 1.45ರ ವೇಳೆಗೆ ಇಬ್ಬರೂ ಅಧಿಕಾರಿಗಳನ್ನು ಕರೆಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಈ ವಿಷಯ ತಿಳಿಸಿದರು. ನಂತರ ನಾಗೇಶ್ವರ ರಾವ್‌ ಅವರಿಗೆ ಬುಲಾವ್‌ ನೀಡಿ ಅವರ ನೇಮಕವನ್ನು ಪ್ರಕಟಿಸಲಾಯಿತು. ತಕ್ಷಣವೇ ಅಧಿಕಾರ ವಹಿಸಿಕೊಂಡ ನಾಗೇಶ್ವರ ರಾವ್‌ ಅವರು ಕೂಡಲೇ 13 ಅಧಿಕಾರಿಗಳನ್ನು ವರ್ಗಾವಣೆಗಳನ್ನು ಮಾಡಿದರು. ಸಿಬಿಐನಲ್ಲಿ ಈ ರೀತಿ ತಡರಾತ್ರಿ ಬೆಳವಣಿಗೆ ನಡೆದಿದ್ದು ಇದೇ ಮೊದಲು.