ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ದಶಕಗಳಿಂದ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ. ಮುಂದಿನ ನಾಲ್ಕು ವಾರಗಳಲ್ಲಿ ನಾವು ತೀರ್ಪು ಪ್ರಕಟಿಸಿಬಿಡುತ್ತೇವೆ. ಆ ಬಳಿಕ ಯಾವುದೇ ಸಂಘಟನೆ ಬೇಕಾದರೂ ಕಾವೇರಿಗೆ ಸಂಬಂಧಿಸಿದ ವಿಚಾರಗಳ ಕುರಿತಂತೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಳ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠ ಮಂಗಳವಾರ ತಿಳಿಸಿದೆ.

ನವದೆಹಲಿ(ಜ.10): ಕರ್ನಾಟಕ ಹಾಗೂ ತಮಿಳುನಾಡು ನಡುವೆ ಶತಮಾನದಿಂದ ಕಗ್ಗಂಟಾಗಿರುವ ಕಾವೇರಿ ಜಲ ವಿವಾದ ಕುರಿತು ಮುಂದಿನ ನಾಲ್ಕು ವಾರದೊಳಗಾಗಿ ತೀರ್ಪು ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಇದರೊಂದಿಗೆ 2007ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ್ದ ಅಂತಿಮ ಐತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಅರ್ಜಿಗಳು ಇತ್ಯರ್ಥವಾಗುವ ದಿನ ಹತ್ತಿರವಾದಂತಾಗಿದೆ. ಜತೆಗೆ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗುತ್ತಾ ಎಂಬ ಆತಂಕವೂ ಮೂಡಿದೆ.

4 ವಾರದಲ್ಲಿ ತೀರ್ಪು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ದಶಕಗಳಿಂದ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ. ಮುಂದಿನ ನಾಲ್ಕು ವಾರಗಳಲ್ಲಿ ನಾವು ತೀರ್ಪು ಪ್ರಕಟಿಸಿಬಿಡುತ್ತೇವೆ. ಆ ಬಳಿಕ ಯಾವುದೇ ಸಂಘಟನೆ ಬೇಕಾದರೂ ಕಾವೇರಿಗೆ ಸಂಬಂಧಿಸಿದ ವಿಚಾರಗಳ ಕುರಿತಂತೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಳ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠ ಮಂಗಳವಾರ ತಿಳಿಸಿದೆ.

ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ವಿಚಾರವಾಗಿ ಮಧ್ಯಪ್ರವೇಶಿಸಬೇಕು ಎಂದು 2016ರಲ್ಲಿ ಬೆಂಗಳೂರಿನ ನಾಗರಿಕ ಸಂಘಟನೆ ‘ಬಿಪ್ಯಾಕ್’ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ವೇಳೆ ನ್ಯಾಯಾಲಯ ಕಾವೇರಿ ತೀರ್ಪು ಪ್ರಕಟಣೆ ಕುರಿತಾದ ವಿಷಯ ಪ್ರಕಟಿಸಿತು. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬಿಪ್ಯಾಕ್ ಅಧ್ಯಕ್ಷರಾಗಿದ್ದರೆ, ಇನ್ಫೋಸಿಸ್‌'ನ ಮಾಜಿ ನಿರ್ದೇಶಕ ಹಾಗೂ ಶಿಕ್ಷಣ ತಜ್ಞ ಮೋಹನ್ ದಾಸ್ ಪೈ ಅವರು ಉಪಾಧ್ಯಕ್ಷರಾಗಿದ್ದಾರೆ.

2007ರ ಫೆ.5ರಂದು ಕಾವೇರಿ ನ್ಯಾಯಾಧಿಕರಣ ನೀಡಿದ್ದ ಅಂತಿಮ ಐತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸರ್ಕಾರಗಳು ಮೇಲ್ಮನವಿ ಸಲ್ಲಿಸಿವೆ. 2017ರ ಸೆಪ್ಟೆಂಬರ್ 20ರಿಂದ ಸತತ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌'ನ ತ್ರಿಸದಸ್ಯ ಪೀಠ ತೀರ್ಪು ಈಗಾಗಲೇ ತೀರ್ಪು ಕಾದಿರಿಸಿದೆ. ತಮಿಳುನಾಡಿಗೆ 419 ಟಿಎಂಸಿ ನೀರು ಹಂಚಿಕೆ ಮಾಡಿದ್ದ ನ್ಯಾಯಾಧಿಕರಣ, ಕರ್ನಾಟಕಕ್ಕೆ 270 ಟಿಎಂಸಿ ನೀಡಿತ್ತು. ವಾಸ್ತವವಾಗಿ ಕರ್ನಾಟಕ ಪ್ರತಿ ವರ್ಷ ತಮಿಳುನಾಡಿಗೆ 162 ಟಿಎಂಸಿ ಬಿಡುಗಡೆ ಮಾಡಬೇಕು ಎಂದು ಹೇಳಿತ್ತು. ಈ ತೀರ್ಪಿನ ವಿರುದ್ಧ ಅಸಮಾಧಾನಗೊಂಡಿದ್ದ ಕರ್ನಾಟಕ ಹಾಗೂ ತಮಿಳುನಾಡು ನ್ಯಾಯಾಧಿಕರಣದಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದವು. ಜತೆಗೆ ಸುಪ್ರೀಂಕೋರ್ಟಿ'ನ ಕದಬಡಿದಿದ್ದವು.